ಮೈಸೂರು, ಸೆಪ್ಟೆಂಬರ್ 20, 2020 (www.justkannada.in): ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರತಿ ವರ್ಷ ಆಯೋಜಿಸುತ್ತಿದ್ದ ರಾಜ್ಯಮಟ್ಟದ ಕಲಾಮೇಳವನ್ನು ರದ್ದು ಮಾಡಲಾಗಿದೆ.
ಜನಪದ ಕಲೆ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮೇಳವನ್ನು ಏರ್ಪಡಿಸಲಾಗುತ್ತಿತ್ತು. ಪ್ರತಿವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ದಿನಾಂಕ 23,24 ಮತ್ತು 25-ಮೂರು ದಿನಗಳ ಕಾಲ ಹಮ್ಮಿಕೊಳ್ಳುತ್ತಿದ್ದ ಈ ಕಲಾಮೇಳದಲ್ಲಿ ರಾಜ್ಯಾದ್ಯಂತ ಆಗಮಿಸುವ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕಲಾವಿದರು ಪಾಲ್ಗೊಂಡು ಶ್ರೀ ಕ್ಷೇತ್ರದಲ್ಲಿ ಜನಪದ ಕಲಾ ಲೋಕವನ್ನೇ ಸೃಷ್ಟಿಸುತ್ತಿದ್ದರು.
ಈ ವರ್ಷ ಕೊರೊನಾ ವೈರಸ್ ಇಡೀ ವಿಶ್ವಾದ್ಯಂತ ಹರಡಿ ಜನರ ಆರೋಗ್ಯವನ್ನು ಕಾಡುತ್ತಿದೆ. ಆದ್ದರಿಂದ ಜನರ ಆರೋಗ್ಯವನ್ನು ರಕ್ಷಿಸುವ ದೃಷ್ಟಿಯಿಂದ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬೇಕಿದ್ದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಈ ವರ್ಷ ರದ್ದುಪಡಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪ್ರಕಟಣೆ ತಿಳಿಸಿದೆ.