ಬೆಂಗಳೂರು,ಸೆ,29,2019(www.justkannada.in): ಆದಿ ಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿಂಗ್ ಆಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದರು. ಈ ಸಂಬಂಧ ತಮ್ಮ ಅಧಿಕಾರವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಯ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ರಾಜಕೀಯ ನಾಯಕರ ಹೇಳಿಕೆಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಹೆಚ್,ಡಿ ಕುಮಾರಸ್ವಾಮಿ, ನನ್ನ ಅಧಿಕಾರವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳ, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಮತ್ತೊಂದು ಟ್ವಿಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಸಚಿವ ಅಶೋಕ್ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗಾಗುತ್ತಿರುವ ಬೇಸರಕ್ಕೆ ಅತೀವ ನೋವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ನಿರ್ಮಲಾನಂದರು ನನಗೆ ನೈತಿಕ ಬಲವಾಗಿದ್ದರು, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದ್ದರು, ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ? ಖಂಡಿತ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Key words: Adichunchanagiri Sri- Phone tapping -Unnecessarily -my name –former CM -HD Kumaraswamy