ಮೈಸೂರು, ಏಪ್ರಿಲ್,2,2022(www.justkannada.in): ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ನಡವಳಿಕೆ ಬಹಳ ಮುಖ್ಯವಾದ ಅಂಗ. ಸಮಾಜದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು. ಸಮಾಜ ನನ್ನಿಂದ ಏನನ್ನು ಅಪೇಕ್ಷೆ ಪಡೆಯುತ್ತದೆ ಎಂದು ನಮ್ಮ ಶಿಸ್ತು ಹಾಗೂ ನಡವಳಿಕೆ ತೀರ್ಮಾನಿಸುತ್ತದೆ. ಹೀಗಾಗಿ ನಮ್ಮ ಶಿಸ್ತು ನಮ್ಮ ನಡವಳಿಕೆಯನ್ನು ರೂಪಿಸುತ್ತದೆ ಎಂದು ಪೊಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧೀಕ್ಷಕರಾದ ಶಿವಕುಮಾರಯ್ಯ ಅವರು ತಿಳಿಸಿದರು.
ಮೈಸೂರು ನಗರ ಪೊಲೀಸ್, ಮೈಸೂರು ಅಶ್ವರೋಹಿ ದಳ, ದಕ್ಷಿಣ ವಲಯದ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಜಿಲ್ಲಾ ಪೊಲೀಸ್, ಕೆ.ಎಸ್.ಆರ್.ಪಿ. 5ನೇ ಪಡೆ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್ಇ, ಲೋಕಾಯುಕ್ತ, ಎಸಿಬಿ, ಚೆಸ್ಕಾಂ, ಐಎಸ್ ಡಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಏಪ್ರಿಲ್ 02 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂಬ ಇತಿಹಾಸ ಎಲ್ಲರೂ ತಿಳಿದುಕೊಂಡಿರಬೇಕು. 1956ರ ಹಿಂದೆ ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯ ಮತ್ತು ಮುಂಬೈ ಪ್ರಾಂತ್ಯದ ಕೆಲವು ಜಿಲ್ಲೆಗಳು ಪೊಲೀಸ್ ಕಾಯ್ದೆಗಳನ್ನು ಕ್ರಮಬದ್ಧವಾಗಿ ಅಳವಡಿಸಿಕೊಳ್ಳುವುದರ ಬದಲು ಅಸ್ತವ್ಯಸ್ತವಾಗಿ ಅಳವಡಿಸಿಕೊಂಡಿದ್ದವು ಎಂದು ಹೇಳಿದರು.
1963ರಲ್ಲಿ ಮೈಸೂರು ವಿಶಾಲ ರಾಜ್ಯ ಎಂದು ಸೇರಿಸಿ ಅಸ್ತವ್ಯಸ್ತತಗೊಂಡಿದ್ದ ಕಾಯ್ದೆಗಳನ್ನು ಮಾರ್ಪಾಡು ಮಾಡಿ ಏಕರೂಪದ ಕಾಯ್ದೆಗಳನ್ನು ತರಲು ತೀರ್ಮಾನ ಮಾಡಿ ಒಂದು ಕಮಿಟಿಯನ್ನು ರಚಿಸಿದರು. ಈ ಕಮಿಟಿಯ ಶಿಫಾರಸ್ಸಿನಂತೆ 1965 ಏಪ್ರಿಲ್ 02ರಂದು ಏಕರೂಪದ ಕಾಯ್ದೆಗಳನ್ನು ಜಾರಿಗೆ ತಂದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಈ ದಿನವನ್ನು ಪೊಲೀಸ್ ಧ್ವಜದಿನಾಚರಣೆಯ ಮೂಲಕ ಆಚರಿಸಲಾಗುತ್ತದೆ ಎಂದರು.
ಪೊಲೀಸ್ ಸೇವೆಯಿಂದ ನಿವೃತ್ತರಾದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗಾಗಿ ಈ ದಿನವನ್ನು ಕಲ್ಯಾಣ ದಿನವೆಂದು ಘೋಷಿಸಲಾಗಿದೆ. ಈ ದಿನವನ್ನು ಕಲ್ಯಾಣ ದಿನವೆಂದು ಘೋಷಿಸಿದ ನಂತರ ಪೊಲೀಸ್ ಕಿರು ಧ್ವಜಗಳನ್ನು ಮಾರಿ ಅದರಿಂದ ಬಂದಂತಹ ಹಣವನ್ನು ನಿವೃತ್ತಿಯಾದ ಪೊಲೀಸ್ ಸಿಬ್ಬಂದಿಗಳಿಗೆ ಸಹಾಯ ರೂಪದಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣವಲಯದ ಐಜಿಪಿ ಪ್ರವೀಣ್ ಮಧುಕರ್ ಪಾವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
Key words: adopt –discipline-helps – behaviour-mysore- Shivakumaraiah