ಬೆಂಗಳೂರು, ನ.25,2024: (www.justkannada.in news) ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ಕೋರ್ಟ್ ಅಂಗಳದಲ್ಲೇ ಮಸಿ ಬಳಿದಿದ್ದ ವಕೀಲೆಯನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.
ಮೀರಾ ರಾಘವೇಂದ್ರ ಎಂಬ ಮಹಿಳಾ ವಕೀಲೆಯೇ ಇದೀಗ ಅಮಾನತುಗೊಂಡಿರುವುದು. ಪ್ರಕರಣವೊಂದರ ಸಂಬಂದ ಬೆಂಗಳೂರು ಕೋರ್ಟ್ ಗೆ ಪ್ರೊ.ಭಗವಾನ್ ಹಾಜರಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಮಹಿಳಾ ವಕೀಲೆ, ಮುಖಕ್ಕೆ ಮಸಿ ಬಳದಿದ್ದರು.
ಘಟನೆ ಹಿನ್ನೆಲೆ:
ಶ್ರೀರಾಮ ದೇವರನ್ನು ತಮ್ಮ ಪುಸ್ತಕದಲ್ಲಿ ಹೀಯಾಳಿಸಿ ಬರೆದಿದ್ದಾರೆ ಹಾಗೂ ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಪ್ರೊ. ಭಗವಾನ್ ರವರ ವಿರುದ್ಧ 2ನೇ ಎಸಿ ಎಂ ಎಂ ನ್ಯಾಯಾಲಯದಲ್ಲಿ ವಕೀಲೆ ಮೀರಾ ರಾಘವೇಂದ್ರ @ ಮೀರಾ ಬಾಯಿ .ಆರ್ ಕೇಸು ದಾಖಲಿಸಿದ್ದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 04/02/2021 ರಂದು ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಪಡೆದು ಕೋರ್ಟಿನಿಂದ ಹೊರಬರುತ್ತಿದ್ದ ಭಗವಾನ್ ರವರ ಮುಖಕ್ಕೆ ಮೀರಾ ರಾಘವೇಂದ್ರ @ ಮೀರಾ ಬಾಯಿ .ಆರ್ ಮಸಿ ಬಳಿದು, ಅಲ್ಲದೇ ಪ್ರೊ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ರವರು ಕೊಲೆಯಾದಂತೆ, ಭಗವಾನ್ ರವರನ್ನೂ ಕೊಲೆ ಮಾಡುವುದಾಗಿ ಜೀವಬೆದರಿಕೆಯನ್ನು ಹಾಕಿದ್ದರು.
ಈ ದೃಶ್ಯ ಹಾಗೂ ವರದಿಗಳು 05/02/2021 ರ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ವಕೀಲೆ ಮೀರಾ ರಾಘವೇಂದ್ರ ರವರ ಈ ನಡತೆಯಿಂದ ಬೇಸತ್ತ ಭಗವಾನ್ ರವರು, ಕರ್ನಾಟಕ ಬಾರ್ ಕೌನ್ಸಿಲ್ ನಲ್ಲಿ ಅವರ ವಿರುದ್ಧ ದೂರನ್ನು ದಾಖಲಿಸಿದ್ದರು.
ಸದರಿ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೀರಾ ರಾಘವೇಂದ್ರ ರವರಿಗೆ ಕಳುಹಿಸಿದ ರಿಜಿಸ್ಟರ್ಡ್ ಅಂಚೆಯನ್ನು ಮೀರಾ ರಾಗವೇಂದ್ರ ರವರು ಸ್ವೀಕರಿಸಲಿಲ್ಲ. ಹಾಗಾಗಿ ಅವರ ಅನುಪಸ್ಥಿತಿಯಲ್ಲಿ ದೂರಿನ ವಿಚಾರಣೆ ನಡೆಸಿದ ಬಾರ್ ಕೌನ್ಸಿಲ್ ಕಮಿಟಿ, ವಕೀಲೆಯಾಗಿ ವೃತ್ತಿಪರರಾಗಿ ಕೆಲಸ ಮಾಡುವ ಮೀರಾ ರಾಘವೇಂದ್ರ ರವರು ದೂರಿನ ಬಗ್ಗೆ ವಿಚಾರಣೆಗೆ ಹಾಜರಾಗದೇ, ನೋಟಿಸನ್ನು ಸ್ವೀಕರಿಸದೇ, ಅವರು ನಡೆದುಕೊಂಡಿರುವ ರೀತಿ ಬಾರ್ ಕೌನ್ಸಿಲ್ ನ ನಿಯಮಗಳಿಗೆ ವಿರ್ರುದ್ಧ ವಾಗಿದ್ದು, ಕೋರ್ಟಿನ ಆವರಣದಲ್ಲಿ ವಕೀಲರ ಸಮವಸ್ತ್ರದಲ್ಲಿದ್ದು ದೂರುದಾರರ ಮುಖಕ್ಕೆ ಮಸಿ ಬಳಿಯುವ ಕೆಲಸ ಅವರ ದುರ್ನಡತೆಯನ್ನು ತೋರಿಸುತ್ತದೆ. ತಮ್ಮ ವೃತ್ತಿಗೆ ಬದ್ಧರಾಗಿರದೆ ಅವರು ನಡೆದುಕೊಂಡಿರುವ ರೀತಿ, ವೃತ್ತಿಯ ಶಿಷ್ಟಾಚಾರಕ್ಕೆ ಅಪಮಾನಮಾಡಿದ್ದು, ಅವರಿಗೆ ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯ ಹಾಗೂ ದೇಶದ ಯಾವುದೇ ನಾಯಯಾಲಯಗಳಲ್ಲಿ ವಕೀಲಿಕೆ ಮಾಡಬಾರದು ಎಂದು, ಮೂರು ತಿಂಗಳ ಕಾಲ ಅಮಾನತ್ತಿನಲ್ಲಿಡುವಂತೆ ಕರ್ನಾಟಕ ಬಾರ್ ಕೌನ್ಸಿಲ್ ದಿನಾಂಕ 20/11/2024 ರಂದು ಆದೇಶಿಸಿದೆ.
ಭಗವಾನ್ ಪ್ರತಿಕ್ರಿಯೆ:
ಬಾರ್ ಕೌನ್ಸಿಲ್ ಕ್ರಮದ ಬಗ್ಗೆ “ ಜಸ್ಟ್ ಕನ್ನಡ” ಜತೆ ಮಾತನಾಡಿದ ಪ್ರೊ.ಭಗವಾನ್ ಹೇಳಿದಿಷ್ಟು…
ನನಗೆ ವೈಯಕ್ತಿಕವಾಗಿ ಮೀರಾ ರಾಘವೇಂದ್ರ ಅವರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಆದರೆ ಬರೆದಿರುವ ಪುಸ್ತಕದ ಬಗ್ಗೆ ಅವರಿಗೆ ಆಕ್ಷೇಪವಿತ್ತು. ಈ ಕಾರಣಕ್ಕೆ ಅವರು ನನ್ನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ನಾನು ಬರೆದಿರುವ ಪುಸ್ತಕ ಸಂಪೂರ್ಣವಾಗಿ ವಾಲ್ಮೀಕಿ ರಾಮಾಯಣ ಆಧರಿಸಿದ್ದು, ಅದರಲ್ಲಿ ಬರುವ ಅಂಶಗಳನ್ನಷ್ಟೆ ನಾನು ಉಲ್ಲೇಖಿಸಿದ್ದೆ. ಆದರೆ ನನ್ನ ಪುಸ್ತಕ ಓದದೆ ಕೆಲವರು ಬಾಯಿಗೆ ಬಂದಂತೆ ಮಾತನಾಡಿದರು. ವಕೀಲೆ ಮೀರಾ , ಕೋರ್ಟ್ ನಲ್ಲಿ ಕೇಸ್ ದಾಖಲಿಸಿದರು. ಆದರೆ ಅವರೇ ಅದರ ವಿಚಾರಣೆಗೆ ಬರಲಿಲ್ಲ ಅಂದ ಮೇಲೆ ವಕೀಲೆಯಾಗಿ ಅವರ ಜವಾಬ್ದಾರಿ ಏನು ಎಂಬುದು ಇದರಿಂದ ತಿಳಿಯುತ್ತದೆ ಎಂದರು.
key words: advocate Meera Raghavendra, Prof. Bhagwan, debarred, Karnataka Bar Council
SUMMARY:
The lady advocate Meera Raghavendra who threw black ink on the face of Prof Bhagwan has been debarred by Karnataka Bar Council today