ಹಾಸನ,ಆ,12,2019(www.justkannada.in): ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್, ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆಶ್ಚರ್ಯ ಎಂದ್ರೆ ಗೃಹ ಸಚಿವರು ಕೇಂದ್ರ ನಿಲುವು ಪ್ರಕಟ ಮಾಡಲಿಲ್ಲ. ಯಾವುದೇ ಭರವಸೆ ಕೊಡದೆ ಹಾಗೆಯೇ ನಿರ್ಗಮಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದರು.
ಹಾಸನದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಭರವಸೆ ನೀಡಿದ್ದರೇ ನಾಡಿನ ಜನರಲ್ಲಿ ಆತ್ಮಸ್ಥೈರ್ಯ ತುಂಬ ಬಹುದಿತ್ತು. ಆದರೆ ಅವರು ನಷ್ಟದ ಮಾಹಿತಿ ಸಿಕ್ಕರೂ, ಯಾವುದೇ ಭರವಸೆ ಕೊಡದೆ ನಿರ್ಗಮಿಸಿದ್ದಾರೆ ಎಂದು ಕಿಡಿಕಾರಿದರು.
ಇವತ್ತು ಸರಕಾರದಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಸಂಪುಟ ರಚನೆಯಾಗಿಲ್ಲ, ಶಾಸಕರ ಮಾತನ್ನು ಎಷ್ಟರ ಮಟ್ಟಿಗೆ ಕೇಳುತ್ತಾರೋ ಗೊತ್ತಿಲ್ಲ. ನಷ್ಟ ಅಂದಾಜು ಮಾಡಲು ಒಂದೂವರೆ ತಿಂಗಳು ಬೇಕಾಗಬಹುದು. ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಲು ಬಿಡ್ಡಿಂಗ್ ನಡೆಯುತ್ತಿದೆ. ಇದನ್ನು ಜನರ ಹಿತ ದೃಷ್ಟಿಯಿಂದ ಮುಂದೂಡಿ. ನಾನು ಇದನ್ನು ಹುಡುಗಾಟಿಕೆಗೆ ಹೇಳುತ್ತಿಲ್ಲ. ಮಾರ್ಕೆಟ್ ರೀತಿ ಅಧಿಕಾರಿಗಳ ಬಿಡ್ಡಿಂಗ್ ಮಾಡಿದ್ರೆ, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯೋದು ಹೇಗೆ. ಇದು ರಾಜಕೀಯ ಆರೋಪ ಅಲ್ಲ, ವಿಪಕ್ಷ ನಾಯಕನಾಗಿ ಸಲಹೆ ನೀಡುತ್ತಿದ್ದೇನೆ ಎಂದು ಹೆಚ್.ಡಿಕೆ ತಿಳಿಸಿದರು.
ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯುದ್ದೋಪಾದಿಯಲ್ಲಿ ಕೆಲಸ ಆಗಬೇಕಿದೆ. ಕೇಂದ್ರದಲ್ಲಿ ಅವರದೇ ಸರಕಾರ ಇದೆ, ಹೆಚ್ಚಿನ ಅನುದಾನ ಪಡೆಯುವಂತೆ ಮನವಿ. ಜನರ ಬದುಕು ಕಟ್ಟಿ ಕೊಡುವುದಕ್ಕಾಗಿಯಾದ್ರೂ ಮಂತ್ರಿ ಮಂಡಲ ರಚನೆಯಾಗಲಿ
ರಾಜ್ಯದಲ್ಲಿ ಇದು ದೊಡ್ಡಮಟ್ಟದ ಮಳೆಯ ಅನಾಹುತ. ಹಿಂದೆ ಕೆಲವೇ ಜಿಲ್ಲೆಗಳಲ್ಲಿ ಇಂಥ ಅನಾಹುತವಾಗಿತ್ತು. ಆದರೆ ಈ ಬಾರಿಯ ಪರಿಸ್ಥಿತಿ ಎಲ್ಲರ ಕೈ ಮೀರಿ ಹೋಗಿದೆ. ಬೆಳಗಾವಿ ಜನರ ಬದುಕು ಶೋಚನೀಯವಾಗಿದೆ. ಚಿಕ್ಕಮಗಳೂರು, ಹಾಸನದಲ್ಲೂ ಹಾನಿಯಾಗಿದೆ. ಹೀಗಾಗಿ ಆಗಸ್ಟ್ 16 ರ ನಂತರ ನಾನು ಈ ಭಾಗದಲ್ಲಿ ಪ್ರವಾಸ ಮಾಡುವೆ. ಇದರಲ್ಲಿ ರಾಜಕೀಯ ಬೆರೆಸುವುದರ ಬದಲು ಬೀದಿಗೆ ಬಿದ್ದಿರುವ ಜನರಲ್ಲಿ ಸ್ಥೈರ್ಯ ತುಂಬಬೇಕಿದೆ. ಇದು ಪ್ರತಿಯೊಬ್ಬ ರಾಜಕೀಯ ನಾಯಕರ ಆದ್ಯ ಕರ್ತವ್ಯ ನಾವೆಲ್ಲರೂ ಒಂದಾಗಬೇಕಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ರಾಜ್ಯದಲ್ಲಿ ನಾಲ್ಕೈದು ಲಕ್ಷ ಮಂದಿ ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಕೊಟ್ಟ ನೆರವು ಏನೆಂಬುದು ಜನರ ಕಣ್ಮುಂದೆ ಇದೆ. ಮುಖ್ಯ ಕಾರ್ಯದರ್ಶಿ ಸೇರಿ ಕೆಲ ಅಧಿಕಾರಿಗಳ ವಿಶ್ವಾಸಕ್ಕೆ ಪಡೆಯಿರಿ, ಅವರಿಗೆ ಮುಕ್ತ ಅವಕಾಶ ನೀಡಿ. ಜನರ ತೆರಿಗೆ ಹಣದಿಂದ ಖಜಾನೆ ಸುಭದ್ರವಾಗಿದೆ, ಅದನ್ನು ನಿರ್ವಹಿಸಲು ದೇವರು ಬುದ್ಧಿ ಕೊಡಲಿ ಎಂದು ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದರು.
ನಾನು 14 ತಿಂಗಳಿಂದ ನನ್ನ ಕಚೇರಿಯನ್ನು ಮಾರ್ಕೆಟ್ ಮಾಡಿರಲಿಲ್ಲ. ಆ ವಿಶ್ವಾಸದಿಂದಲೇ ಅತಿವೃಷ್ಟಿ ವೇಳೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಇನ್ನೂ ಮಳೆಹಾನಿ ಪರಿಹಾರ ಕಾರ್ಯ ಆರಂಭವಾಗಿಯೇ ಇಲ್ಲ. ನಿರಾಶ್ರಿತರ ಕೇಂದ್ರದಲ್ಲಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರದಿಂದ ನಾಲ್ಕೈದು ಸಾವಿರ ಕೋಟಿ ಕೊಡಬೇಕು ಎಂದು ಆಗ್ರಹಿಸಿದರು.
ಹಾಗೆಯೇ ಕೂಡಲೇ ವಿಪಕ್ಷ ನಾಯಕರು, ನಿಮ್ಮ ಪಕ್ಷದ ಮುಖಂಡರ ಸಭೆ ಕರೆಯಿರಿ. ಜನರಿಗೆ ಹೊಸ ಜೀವನ ಕೊಡಲು ನಾವೆಲ್ಲರೂ ಒಂದಾಗಿ ಹೋಗೋಣ. ರಾಜ್ಯ ಸರಕಾರದಲ್ಲಿ ಹಣ ಇದೆ, ರೈತರ ಸಾಲಮನ್ನಾ ಹಣವನ್ನೇ ಡೈವೋರ್ಟ್ ಮಾಡಬಹುದು. ರಾಜ್ಯದ ಬೊಕ್ಕಸ ದೇವರು ಕಾಪಾಡಬೇಕಿಲ್ಲ, ಯಡಿಯೂರಪ್ಪ ಅವರನ್ನು ಕಾಪಾಡಬೇಕು ಎಂದು ಬಿಎಸ್ ಯಡಿಯೂರಪ್ಪಗೆ ತಿರುಗೇಟು ನೀಡಿದರು. ಬಿಜೆಪಿ ಸರಕಾರ ಟೇಕಾಫ್ ಆಗಿದೆಯೇ ಎಂಬುದನ್ನು ಅವರನ್ನೇ ಕೇಳಿ ಎಂದು ಹೆಚ್ಡಿಕೆ ಟಾಂಗ್ ಕೊಟ್ಟರು.
Key words: aerial survey- Former CM -HD Kumaraswamy -displeasure – Central govrnement