ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಮಗುವಂತಿದ್ದ ಅಪ್ಪು ಸಾವಿನ ಜತೆ ಅಭಿಮಾನಿಗಳ ನೋವನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಶಿವರಾಜ್ ಕುಮಾರ್ ಹೇಳಿದರು.
ಅಪ್ಪು ಅಂತ್ಯಕ್ರಿಯೆ ಬಳಿಕ ಮೂರು ದಿನಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ನನಗಿಂತ 13 ವರ್ಷ ಚಿಕ್ಕವರು. ಎತ್ತಿ ಆಡಿಸಿದ್ದೇನೆ. ಈಗ ಮಗುವನ್ನೇ ಕಳೆದುಕೊಂಡಷ್ಟೇ ನೋವಾಗಿದೆ. ಈ ಮೂರು ದಿನ ಅಭಿಮಾನಿಗಳು ಸಾಕಷ್ಟು ನೊಂದಿದ್ದಾರೆ. ಆದರೆ ಏನು ಮಾಡಲು ಆಗಲ್ಲ. ದೇವರಿಗೂ ಅಪ್ಪು ಕಂಡರೆ ಇಷ್ಟ ಇರಬೇಕು. ಅದಕ್ಕೆ ಬೇಗ ಕರೆದುಕೊಂಡಿದ್ದಾರೆ ಎಂದು ಶಿವಣ್ಣ ಕಣ್ಣೀರಾದರು.
ಅಪ್ಪು ಸಾವಿನ ಜತೆ ಅಭಿಮಾನಿಗಳ ನೋವನ್ನು ಅರಗಿಸಿಕೊಳ್ಳುವುದು ಕಷ್ಟ. ಮೂರು ದಿನ ಲಕ್ಷಾಂತರ ಕಣ್ಣುಗಳಲ್ಲಿ ನೀರು ಸುರಿದಿದೆ. ಈ ಕಾಲದಲ್ಲಿ ಸಹಕರಿಸಿದ ಸರಕಾರ, ಪೊಲೀಸರು ನಾನಾ ಇಲಾಖೆಗಳ ಅಧಿಕಾರಿಗಳಿಗೆ ಶಿವರಾಜ್ ಕುಮಾರ್ ಧನ್ಯವಾದ ಸಲ್ಲಿಸಿದರು.
ಶೋ ಮಸ್ಟ್ ಗೋ ಆನ್. ಏನು ಮಾಡಲು ಆಗುವುದಿಲ್ಲ. ಅಣ್ಣವ್ರ ಕುಟುಂಬದ ಮೇಲೆ ಜನ, ಸರಕಾರ ತೋರಿದ ಪ್ರೀತಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು ಎಂದು ಶಿವಣ್ಣ ಹೇಳಿದರು.
ಆತ್ಮಹತ್ಯೆ ಹಾದಿ ಬೇಡ: ಕೆಲ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ಅಪ್ಪಿಗೆ ಇದು ಇಷ್ಟವಾಗುತ್ತಿರಲಿಲ್ಲ. ನಿಮಗೂ ಕುಟುಂಬ ಇರುತ್ತೆ. ಅವರು ನಿಮ್ಮನ್ನೆ ಅವಲಂಬಿಸಿರುತ್ತಾರೆ. ಹೀಗಾಗಿ ನೋವಿನಲ್ಲಿ ಸಾವಿನ ಹಾದಿ ಹಿಡಿಯದಂತೆ ಕಿವಿಮಾತು ಹೇಳಿದರು.