ಸಿದ್ದರಾಮಯ್ಯ ಬಳಿಕ ಕನ್ನಡ ಸ್ಥಿತಿ ಅಧೋಗತಿ: ವಾಟಾಳ್ ನಾಗರಾಜ್

ಮೈಸೂರು,ನವೆಂಬರ್,14,2024 (www.justkannada.in): ಸಿದ್ದರಾಮಯ್ಯ ಬಳಿಕ ಕನ್ನಡ ಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಇಂದು ಮೈಸೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರು ನನ್ನನ್ನ ಆಹ್ವಾನಿಸುವ ಧೈರ್ಯ ಮತ್ತು ತಾಕತ್ತು ಇಲ್ಲ. ಇವರೆಲ್ಲ ಕನ್ನಡ ಉಳಿಸುವ ಕೆಲಸ ಮಾಡುತ್ತಿಲ್ಲ. ಕನ್ನಡ ಉಳಿಸುವ ಕೆಲಸ ವರ್ಷದಲ್ಲಿ ಒಂದು ಸಾರಿ ಮಾಡಿದರೆ ನಾನು ವರ್ಷ ಪೂರ್ತಿ ಮಾಡುತ್ತೇನೆ. ಕನ್ನಡ ಎಲ್ಲಿ ಉಳಿದಿದೆ ಈಗ ಕನ್ನಡ ತಬ್ಬಲಿಯಾಗಿದೆ. ಅನ್ಯ ಭಾಷಿಗರ ದಬ್ಬಾಳಿಕೆ ರಾಜ್ಯದಲ್ಲಿ ಹೆಚ್ಚಾಗಿದೆ. ಇದು ನಿಲ್ಲಬೇಕು. ಸಿದ್ದರಾಮಯ್ಯ ಇರುವವರೆಗೆ ಮಾತ್ರ.  ಇನ್ನು ಮುಂದಕ್ಕೆ ಕನ್ನಡದ ಗತಿ ಏನಾಗುತ್ತೋ ಗೊತ್ತಿಲ್ಲ ಎಂದು ಪ್ರಸ್ತುತ ಕನ್ನಡ ಭಾಷೆ ಪರಿಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದರು.

ಬಂಡಿಪುರ ಅಭಯಾರಣ್ಯದಲ್ಲಿ  ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧ ತೆರವಿಗೆ ವಾಟಾಳ್ ನಾಗರಾಜ್ ವಿರೋಧ.

ಬಂಡಿಪುರ ಅಭಯಾರಣ್ಯದಲ್ಲಿ  ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧ ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು. ನಿರ್ಬಂಧ ತೆರವು ಮಾಡಿದರೆ ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಧಕ್ಕೆ ಆಗುತ್ತದೆ. ಕಾಡುಗಳ್ಳರು ಹೆಚ್ಚಾಗುತ್ತಾರೆ, ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತದೆ.  ಹಾಗಾಗಿ ರಾತ್ರಿ ಸಂಚಾರ ತೆರವು ಮಾಡುವ ಪ್ರಸ್ತಾಪ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ನಿಜಲಿಂಗಪ್ಪ ಅವರ ನಿವಾಸವನ್ನ ರಾಷ್ಟ್ರೀಯ ಸ್ಮಾರಕ ಮಾಡಲು ಒತ್ತಾಯ

ಹಾಗೆಯೇ ಮಾಜಿ ಸಿಎಂ ನಿಜಲಿಂಗಪ್ಪ ಅವರ ನಿವಾಸವನ್ನ ರಾಷ್ಟ್ರೀಯ ಸ್ಮಾರಕ ಮಾಡಲು ವಾಟಾಳ್ ನಾಗರಾಜ್ ಒತ್ತಾಯಯಿಸಿದರು.

ಸರ್ಕಾರವೇ ಮನೆ ಖರೀದಿಸಿ ಸಂರಕ್ಷಣೆ ಮಾಡಬೇಕು. ನಿಜಲಿಂಗಪ್ಪ ಅವರ ಕೊಡುಗೆ ರಾಜ್ಯಕ್ಕೆ ಅಪಾರ. ಅವರು ಪ್ರಧಾನಿಯಾಗುವ ಅವಕಾಶಗಳಿತ್ತು. ಅವರು ಸರಳ ಸಜ್ಜನ ವ್ಯಕ್ತಿ.  ಕೊನೆಗಾಲದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ  ಚಿಕಿತ್ಸೆಗೆ ನಿರಾಕರಿಸಿ ಚಿತ್ರದುರ್ಗ ನಿವಾಸದಲ್ಲೇ ಕೊನೆಯುಸಿರೆಳೆದರು. ಹಾಗಾಗಿ ಮನೆಯನ್ನ ಬೇರೆ ಯಾರಿಗೂ ಮಾರಾಟ ಮಾಡದೆ ಅದನ್ನ ಒಂದು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

Key words: After, Siddaramaiah, Kannada, status, Vatal Nagaraj