ಮೈಸೂರು,ಆಗಸ್ಟ್,19,2021(www.justkannada.in): ಮೈಸೂರು ಬೆಂಗಳೂರು ನಡುವಿನ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗುಡುಗಿದ್ದಾರೆ.
ಈ ಯೋಜನೆಗೆ ಸಿದ್ದರಾಮಯ್ಯ ಎಂಟು ಪೈಸೆ ನೀಡಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತರಾಟೆ ತೆಗೆದುಕೊಂಡ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ಈ ಯೋಜನೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅನುಮೋದನೆ ದೊರೆತಿದೆ. ಈ ಬಗ್ಗೆ ನಮ್ಮ ಬಳಿ ಸೂಕ್ತ ದಾಖಲೆಗಳಿವೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು. ಪ್ರತಾಪ್ ಸಿಂಹ ಅವರೇ ಮೈಸೂರು ಬೆಂಗಳೂರು ಕಾಮಗಾರಿಯ ರೂವಾರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಂದ ಹೇಳಿಸಲಿ. ಈ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಲ್ಲ. ಶೇಕಡಾ 40% ರಷ್ಟು ಹಣವನ್ನು ರಾಜ್ಯ ಸರ್ಕಾರವು ನೀಡಬೇಕಿದೆ. ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಅವರನ್ನು ಸಂಸದ ಎಂದು ಕರೆಯುವುದಿಲ್ಲ, ಸುಳ್ಳುಗಾರ ಎಂದು ಕರೆಯುತ್ತೇನೆ ಎಂದು ಈ ಮೊದಲು ಹೇಳಿದ್ದೆ. ಆ ಮಾತಿಗೆ ಈಗಲೂ ಬದ್ದನಾಗಿದ್ದೇನೆ. ಇದು ಹತ್ತು ಪಥದ ರಸ್ತೆ ಕಾಮಗಾರಿಯಲ್ಲ, ಕೇವಲ ಆರು ಪಥದ ರಸ್ತೆ ಕಾಮಗಾರಿ ಆಗಿದೆ. ಅದು ಅಲ್ಲದೇ ಈ ಯೋಜನೆಯನ್ನು ತಂದಿದ್ದು ನಾನೇ ಎಂದು ಹೇಳಿಕೊಂಡು ತಿರುಗುತ್ತಿರುವ ಪ್ರತಾಪ್ ಸಿಂಹಗೆ ನಾಚಿಕೆಯಾಗಲ್ಲವೇ.? ಈ ವಿಚಾರದಲ್ಲಿ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ ಎಂದು ಟೀಕಿಸಿದರು.
ಪ್ರತಾಪ್ ಸಿಂಹರವರೇ ನಿಮ್ಮ ಆದರ್ಶ ಗ್ರಾಮ ಯೋಜನೆ ಏನಾಯಿತು.? ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿಗೆ ಆದರ್ಶ ಗ್ರಾಮ ಯೋಜನೆಯಡಿ ಎಷ್ಟು ಹಣ ಕೊಟ್ಟಿದ್ದೀರಿ.? ಆ ಗ್ರಾಮದ ಪರಿಸ್ಥಿತಿ ಈಗ ಏನಾಗಿದೆ ಎಂದು ನಿಮಗೆ ತಿಳಿದಿದೆಯಾ.? ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಪ್ರತಾಪ್ ಸಿಂಹ ನಂಬರ್ ಟು ಸ್ಥಾನದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಸಚಿವರಿಗೆ ಆರ್.ಎಸ್.ಎಸ್ ತರಬೇತಿ ನೀಡಿ ಕಳಿಸುತ್ತಿದೆ. ಆ ಮೂಲಕ ಯಾವುದೇ ವಿಚಾರಗಳು ಇಲ್ಲದಿದ್ದರೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಂತೆ ಆರ್.ಎಸ್.ಎಸ್ ತರಬೇತಿ ನೀಡುತ್ತಿದೆ. ಪ್ರಧಾನಿ ಮೋದಿಯವರ ಆಸ್ತಿ ಒಂದು ಸೂಟ್ ಕೇಸ್ ಮಾತ್ರ ಇದೆ ಎಂದು ಹೇಳಿರುವ ಸಚಿವ ಶೋಭಾ ಕರಂದ್ಲಾಜೆ ಅವರೇ ನಿಮ್ಮ ಆಸ್ತಿ ಎಷ್ಟಿದೆ.? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಎಂ ಲಕ್ಷ್ಮಣ್. ಪ್ರಶ್ನಿಸಿದರು.
ಜನಾಶೀರ್ವಾದ ಯಾತ್ರೆಯ ನೆಪದಲ್ಲಿ ಕೊರೊನಾ ಸೋಂಕು ಹರಡಿಸಲಾಗುತ್ತಿದೆ. ಬಿಜೆಪಿಯ ಜನಾಶೀರ್ವಾದ ಯಾತ್ರೆಗೆ ಅವಕಾಶ ನೀಡುತ್ತಿರುವ ಜಿಲ್ಲಾಧಿಕಾರಿಗಳು, ಜನಸಾಮಾನ್ಯರಿಗೇಕೆ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ.? ಕೇಂದ್ರ ಸಚಿವ ಭಗವಂತ್ ಕೂಬಾ ಸ್ವಾಗತದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವುದು ತಾಲಿಬಾನ್ ಸಂಸ್ಕೃತಿಯಾಗಿದೆ. ಕೇಂದ್ರ ಸಚಿವ ಭಗವಂತ್ ಕೂಬಾ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ 27 ಓಬಿಸಿ 12 ಜನ ಎಸ್ ಸಿ 8 ಜನ ಎಸ್ ಟಿಗೆ ಮಂತ್ರಿ ಸ್ಥಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ನೀವು ಕೊಟ್ಟಿರುವುದು ಕೇವಲ ರಾಜ್ಯ ಖಾತೆ. ಒಂದೇ ಸಮುದಾಯ ಶೇ 2 ಇರುವವರಿಗೆ 15 ಪ್ರಮುಖ ಖಾತೆ ಕೊಟ್ಟಿದ್ದೀರಿ.ಕ್ಯಾಬಿನೆಟ್ ರ್ಯಾಂಕಿಂಗ್ ಎಸ್ ಸಿಗಳಿಗೆ ಏಕೆ ಕೊಟ್ಟಿಲ್ಲ.? ಎಂದು ಪ್ರಶ್ನಿಸಿದ ಎಂ. ಲಕ್ಷ್ಮಣ್, ಕಾಣೆಯಾಗಿದ್ದ ಶೋಭಕ್ಕ ರಾಜ್ಯ ಖಾತೆ ಕೊಟ್ಟ ತಕ್ಷಣ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹೇಳಿಕೆಗಳನ್ನು ಹೇಳಲು ತರಬೇತಿ ನೀಡುತ್ತಾರೆ. ಶೋಭಕ್ಕ ನಿಮ್ಮ ಆಸ್ತಿ ಎಷ್ಟು ತಿಳಿಸಿ. ಕೊಡಗಿನಲ್ಲಿ 200 ಎಕರೆ ಕಾಫಿ ತೋಟ ಎಲ್ಲಿಂದ ಬಂತು.? ಬೆಂಗಳೂರು ಮೈಸೂರಿನ ಆಸ್ತಿ ಎಷ್ಟು.? ರೈತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಹರಿಹಾಯ್ದರು.
ಮೂರನೇ ಅಲೆ ಆರಂಭವಾದ್ರೆ ಅದಕ್ಕೆ ಬಿಜೆಪಿಯವರೇ ಕಾರಣ.
ಜನಾಶೀರ್ವಾದ ಯಾತ್ರೆಗೆ ವಿರೋಧ ಇದಕ್ಕೆ ಅನುಮತಿ ಕೊಟ್ಟಿದ್ದು ಯಾರು? ಮೂರನೇ ಅಲೆ ಆರಂಭವಾದ್ರೆ ಅದಕ್ಕೆ ಬಿಜೆಪಿಯವರೇ ಕಾರಣ. ಕುಂಭ ಮೇಳದಿಂದಲೇ ಎರಡನೇ ಅಲೆ ಬಂದಿದೆ. ದೇಶದಾದ್ಯಂತ ಜನಾಶೀರ್ವಾದ ಯಾತ್ರೆ ಮೂಲಕ ಕೊರೊನಾ ಅಂಟಿಸುತ್ತಿದ್ದಾರೆ. ದೇವಸ್ಥಾನಕ್ಕೆ ಕೈ ಮುಗಿಯಲು ಬಿಡುತ್ತಿಲ್ಲ. ಆದರೆ ಯಾತ್ರೆಗೆ ಹೇಗೆ ಅವಕಾಶ ಕೊಟ್ಟರಿ ? ಎಂದು ಕಿಡಿಕಾರಿದರು.
ಜನಾಶೀರ್ವಾದ ಯಾತ್ರೆಯಲ್ಲಿ ಬಂದೂಕು ಹಾರಿಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆರ್ ಎಸ್ ಎಸ್ ಸಂಸ್ಕೃತಿ ತಾಲಿಬಾನ್ ಸಂಸ್ಕೃತಿ. ಭಗವಂತ ಖೂಬಾ ವಿರುದ್ದ ಏಕೆ ಎಫ್ ಐ ಆರ್ ಮಾಡಿಲ್ಲ. ಅವರನ್ನು ಅರೆಸ್ಟ್ ಮಾಡಿ ಒಳಗೆ ಹಾಕಬೇಕು. ಈಗ ಪಟಾಕಿ ಅಂತಾ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮಗೆ ತಾಕತ್ ಇದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಿ.
ಸಿಟಿ ರವಿ ಮಾನನಷ್ಟ ಮೊಕದ್ದಮೆ ದಾಖಲಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಮಾನ ಇದ್ದರೆ ತಾನೇ ಮಾನ ನಷ್ಟ ಮೊಕದ್ದಮೆ ದಾಖಲಿಸುವುದು. ನಿಮಗೆ ತಾಕತ್ ಇದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಿ. ನಿಮ್ಮ ಜಾತಕವನ್ನು ನ್ಯಾಯಾಲಯದಲ್ಲಿ ಸಂಪೂರ್ಣ ಜಾಲಾಡುತ್ತೇವೆ. ನೀವು 1 ಸಾವಿರ ಕೋಟಿ ಒಡೆಯ ಒಂದು ಸಾವಿರ ಕೋಟಿ ನಿಮಗೆ ಹೇಗೆ ಬಂತು. ಇದು ನಿಮ್ಮ ತಂದೆ ತಾಯಿ ಪಿತ್ರಾರ್ಜಿತ ಸ್ವತ್ತಾ ? ನೀವು ಟಾಟಾ ಅಂಬಾನಿ ಫ್ಯಾಮಿಲಿಯವರಾ ? ಕುಡಿದಿಲ್ಲ ಅಂದಾದ ಮೇಲೆ ಏಕೆ ತಲೆ ಮರೆಸಿಕೊಂಡಿರಿ ? ಪರೀಕ್ಷೆ ಏಕೆ ಮಾಡಸಿಕೊಳ್ಳಲಿಲ್ಲ ? ಮನೆಯಲ್ಲಿ ಮಲಗಿದ್ದವನನ್ನು ಕರೆದುಕೊಂಡು ಬಂದು ತೋರಿಸಿದ್ದೀರಿ ಎಂದು ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದರು.
Key words: against –BJP-KPCC –spokesperson- M Laxman- MP-Pratap simha- Daspath-road