ಮೈಸೂರು,ಜನವರಿ,15,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಇವರ ನಡುವೆ ಶುಕ್ರವಾರ ಪರಸ್ಪರ ತಿಳುವಳಿಕೆ ಪತ್ರಕ್ಕೆ ಒಪ್ಪಂದ ಮಾಡಿಕೊಳ್ಳಲಾಯಿತು.
ಕ.ರಾ,ಮು.ವಿ. ದಾವಣಗೆರೆ ಪ್ರಾದೇಶಿಕ ಕೇಂದ್ರದಲ್ಲಿನ ಕಟ್ಟಡದಲ್ಲಿ 10.000 ಚದರಡಿ ವಿಸ್ತೀರ್ಣವನ್ನು ಈ ಉದ್ದೇಶಕ್ಕೆ ನೀಡಲಾಗಿದೆ. ಭಾರತ ಸರ್ಕಾರದ ಯೋಜನೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪಡೆದುಕೊಂಡಿದ್ದು, ಈ ಯೋಜನೆಯಡಿ ಐ.ಟಿ. ಉದ್ಯಮ, ಎಲೆಕ್ಟ್ರಾನಿಕ್ ಉದ್ಯಮಕ್ಕೆ ಪೂರಕವಾದ ಚಟುವಟಿಕೆಗಳನ್ನು ನಡೆಸುತ್ತಿದೆ. ಭವಿಷ್ಯದಲ್ಲಿ ಕ.ರಾ.ಮು.ವಿ.ಯ ವಿದ್ಯಾರ್ಥಿ ಸಮೂಹಕ್ಕೆ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಹೆಚ್ಚಿನ ಬೆಂಬಲ ಹಾಗೂ ಸೇವೆ ದೊರೆಯಲಿದೆ.
ದಾವಣಗೆರೆ ಪ್ರಾದೇಶಿಕ ಕೇಂದ್ರವನ್ನು ಈ ಉದ್ದೇಶಕ್ಕಾಗಿ ವಿಶ್ವವಿದ್ಯಾನಿಲಯವು ಒದಗಿಸಿದೆ. ವಿಶ್ವವಿದ್ಯಾನಿಲಯದ ಕೋರ್ಸ್‍ಗಳು, ಕೈಗಾರಿಕಾ ಅಗತ್ಯತೆಗಳು ಹಾಗೂ ಉದ್ಯಮದ ಅವಶ್ಯಕತೆಗಳಿಗೆ ಅನುಕೂಲವಾಗುವಂತೆ ಪಠ್ಯಕ್ರಮ ರಚನೆಗೆ, ಸೌಲಭ್ಯಗಳು ಸೃಷ್ಟಿಯಾದಾಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಒಟ್ಟಾರೆಯಾಗಿ ನೆರವಾಗಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ವಿಶ್ವವಿದ್ಯಾನಿಲಯವು ತನ್ನ ಕೋರ್ಸ್‍ಗಳ ಮುಖಾಂತರ ಕೈಗಾರಿಕೆ ಮತ್ತು ಉದ್ಯಮಗಳ ಜೊತೆ ಸಮೀಕರಿಸಿಕೊಳ್ಳಲು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ, ಅಧ್ಯಾಪಕವರ್ಗದವರಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಒಟ್ಟಾರೆ ಮಾಹಿತಿ ತಂತ್ರಜ್ಞಾನದ ಒತ್ತಾಸೆ ಪಡೆಯುವಲ್ಲಿ ಈ ಒಪ್ಪಂದ ನೆರವಾಗಲಿದೆ. ವಿಶ್ವವಿದ್ಯಾನಿಲಯವು ತನ್ನ ಎಲ್ಲಾ ವಿದ್ಯಾರ್ಥಿಗಳ ಒಳಿತಿಗಾಗಿ ಹಾಗೂ ಭವಿಷ್ಯದ ದೃಷ್ಟಿಯಿಂದ ಈ ಒಪ್ಪಂದವನ್ನು ಮಾಡಿಕೊಂಡಿದೆ. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು, ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಎಸ್.ಟಿ.ಪಿ.ಐ. ನಿರ್ದೇಶಕರಾದ ಶೈಲೇಂದ್ರಕುಮಾರ್‍ತ್ಯಾಗಿ ಇವರುಗಳ ಒತ್ತಾಸೆಯೊಂದಿಗೆ ಕಾರ್ಯಕ್ರಮ ಜಾರಿಯಾಗುತ್ತಿದೆ. ಎಸ್.ಟಿ.ಪಿ.ಐ. ಸ್ಥಾಪಿಸುತ್ತಿರುವ ಈ ಕೇಂದ್ರ ಕರ್ನಾಟಕದ 5ನೇ ಕೇಂದ್ರವಾಗಿದೆ.
ಇಂದು ನಡೆದ ಈ ಒಡಬಂಡಿಕೆ ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ಹಣಕಾಸು ಅಧಿಕಾರಿ ಡಾ. ಖಾದರ್‍ಪಾಷ, ಡೀನ್ (ಶೈಕ್ಷಣಿಕ) ರಾದ ಡಾ. ಕಾಂಬ್ಳೆ ಅಶೋಕ್ , ಪರೀಕ್ಷಾಂಗ ಕುಲಸಚಿವರಾದ ಡಾ. ಕವಿತಾ ರೈ, ಡೀನ್ (ಆಧ್ಯಯನ ಕೇಂದ್ರ) ರಾದ ಡಾ. ಷಣ್ಮುಖ, ಐ,ಟಿ. ಹಾಗೂ ಕಂಪ್ಯೂಟರ್ ವಿಭಾಗಗಳ ಮುಖ್ಯಸ್ಥರಾದ ಡಾ. ಬಿ.ಎಸ್. ರಶ್ಮಿ, ಡಾ. ಸುನಿತ, ಎಸ್.ಟಿ.ಪಿ.ಐ. ಅಧಿಕಾರಿಗಳಾದ ಜಯಪ್ರಕಾಶ್, ಕರಾಮುವಿಯ ಅಭಿಯಂತರ ಭಾಸ್ಕರ್ ರವರು ಹಾಜರಿದ್ದರು.
Key words: Agreement- between-mysore- KSOU -STPI.