ಬೆಂಗಳೂರು, ಡಿಸೆಂಬರ್ 17,2020(www.justkannada.in): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಇಂದು ಸಹಿ ಮಾಡಲಾಯಿತು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಮೂರು ವರ್ಷಗಳ ಅವಧಿಯ ಒಪ್ಪಂದಕ್ಕೆ ಎರಡೂ ಸರ್ಕಾರಗಳು ಸಹಿ ಮಾಡಿವೆ ಎಂದರು.
ಸಹಕಾರ , ವಾಣಿಜ್ಯ ಮತ್ತು ವ್ಯಾಪಾರ , ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣಾ ಮತ್ತು ಸಂಸ್ಕೃತಿ ಮುಂತಾದ ಹಲವು ಕ್ಷೇತ್ರಗಳಿಗೆ ಭಾರತ ಮತ್ತು ಬ್ರಿಟಿಷ್ ನಡುವಿನ ಸಂಬಂಧ ವ್ಯಾಪಿಸಿದೆ. ಕರ್ನಾಟಕ ಸರ್ಕಾರದ ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ ಕಾರ್ಯಕ್ರಮವು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳೊಂದಿಗೆ ನಾವೀನ್ಯತಾ ಪಾಲುದಾರಿಕೆಯನ್ನು ಹೆಚ್ಚಿಸುವ ಮೂಲಕ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ತಂತ್ರಜ್ಞಾನ ಹಬ್ ಎಂಬ ಜಾಗತಿಕ ಕೀರ್ತಿಗೆ ಪಾತ್ರವಾಗಿಸಿದೆ. ಯು.ಕೆ ಕರ್ನಾಟಕದ ಬಹುಮುಖ್ಯ ಜಿ.ಐ.ಎ ಪಾಲುದಾರನಾಗಿದ್ದು, 2017-18 ರಲ್ಲಿ ಶೇ 38% ರಷ್ಟು ಹೂಡಿಕೆಯನ್ನು ಭಾರತದಲ್ಲಿ ಬ್ರಿಟಿಷ್ ಸರ್ಕಾರ ಮಾಡಿದೆ.
ಟೆಕ್ ಹಬ್, ಟೆಕ್ ಕ್ಲಸ್ಟರ್ಸ್ ಸ್ಥಾಪನೆ ಹಾಗೂ ಗೋ ಗ್ಲೋಬಲ್ ನಂತಹ ಕಾರ್ಯಕ್ರಮಗಳು ಭಾರತದಿಂದ ನಾವೀನ್ಯತಾ ಸ್ಟಾರ್ಟ್ ಅಪ್ಗಳನ್ನು ಯು.ಕೆಗೆ ತಲುಪಿಸಲು ಸಾಧ್ಯವಾಗಿಸಿರುವುದು ಸ್ವಾಗತಾರ್ಹ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯು ಬ್ರಿಟಿಷ್ ಸರ್ಕಾರದೊಂದಿಗೆ ಹವಾಮಾನ ಸ್ಥಿತಿಸ್ಥಾಪಕ ನಗರಗಳ ಸಮೃದ್ಧ ನಗರಾಭಿವೃದ್ಧಿ ಕಾರ್ಯಕ್ರಮದ ಮೂಲಕ ಈಗಾಗಲೇ ಸಹಯೋಗವನ್ನು ಬೆಳೆಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಬಹುವಿಧ ಸಾರಿಗೆ ಹಬ್ ಗಳ ವಿನ್ಯಾಸ ಮತ್ತು ಕಾರ್ಯಾಚರಣೆಗೆ ಪರಿವರ್ತಿತ ಯೋಜನೆಯನ್ನು ತರುವಲ್ಲಿ ಸಹಕಾರಿಯಾಗಿದೆ. ಸಮಗ್ರ ಸಾರಿಗೆ ಪ್ರಾಧಿಕಾರ ಮತ್ತು ಸಾರಿಗೆ ಪರಿವೀಕ್ಷಣಾಲಯವನ್ನು ಯುಕೆ ಕಾಟಪಲ್ಟ್ ನ ಸಹಯೋಗದೊಂದಿಗೆ ಜಾರಿಗೆ ತರಲಾಗುತ್ತಿದೆ ಎಂದರು.
ಈ ಯೋಜನೆಯು ವಾಯು ಮಾಲಿನ್ಯ ತಡೆಗೆ ನವೀನ ಮಾದರಿಗಳನ್ನು ಕಲ್ಪಿಸುತ್ತದೆ. ಈ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಪ್ರತಿಫಲಿಸಲು ಇದೊಂದು ವೇದಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸಬಹುದಾಗಿದೆ ಎಂದರು.
ಬ್ರಿಟಿಷ್ ಕೌನ್ಸಿಲ್ನ (ಭಾರತ) ನಿರ್ದೇಶಕರಾದ ಬಾರ್ಬರಾ ವಿಕ್ಹ್ಯಾಮ್ ಮಾತನಾಡಿ, ಈ ಒಪ್ಪಂದವು ಭಾರತ ಸರ್ಕಾರ ಮತ್ತು ಯುಕೆ ನಡುವಿನ ಶೈಕ್ಷಣಿಕ ಸಂಬಂಧವನ್ನು ಸುಭದ್ರಗೊಳಿಸುವುದರ ಜೊತೆಗೆ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ತಿಳಿಸಲಾಗಿರುವ ಜ್ಞಾನ ವರ್ಧನೆಯ ಆಶಯವನ್ನು ಬೆಂಬಲಿಸಲಿದೆ ಎಂದರು. ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಸೃಜಿಸಿ ರಾಜ್ಯ ಸರ್ಕಾರದ ಗುಣಮಟ್ಟವುಳ್ಳ ಉನ್ನತ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ತಲುಪಲು ನೆರವಾಗಲಿದೆ ಎಂದು ಹೇಳಿದರು.
ಬಳಿಕ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಭಾರತ ಸನ್ನದ್ಧವಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯು ಇದಕ್ಕೆ ಪೂರಕವಾದ ಅವಕಾಶವನ್ನು ಕಲ್ಪಿಸಲಿದೆ. ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದ್ದು, ಬ್ರಿಟಿಷ್ ಕೌನ್ಸಿಲ್ ಮೂಲಕ ಯುಕೆ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗಿನ ಸಹಯೋಗ ಸಮಯೋಚಿತವಾಗಿದೆ ಎಂದರು. ಯೋಜಿತ ಕ್ರಮಗಳ ಮೂಲಕ ಉನ್ನತ ಶಿಕ್ಷಣದ ಪಾಲುದಾರರಿಗೆ ಹೆಚ್ಚಿನ ಲಾಭವನ್ನು ಈ ಸಹಯೋಗ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.
ಬ್ರಿಟಿಷ್ ಕೌನ್ಸಿಲ್ನ ದಕ್ಷಿಣ ಭಾರತ ನಿರ್ದೇಶಕಿ ಜಾನಕ ಪುಷ್ಪನಾಥನ್ ಮಾತನಾಡಿ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಜಗತ್ತಿನ ಎಲ್ಲಾ ಸರ್ಕಾರಗಳ ಪ್ರಮುಖ ಆಶಯವಾಗಿದ್ದು , ಒಪ್ಪಂದವು ಈ ಆಶಯವನ್ನು ಈಡೇರಿಸುವಲ್ಲಿ ಸಹಕಾರಿಯಾಗಲಿದೆ. ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ವಿದ್ಯಾರ್ಥಿ ಮತ್ತು ಸಂಶೋಧಕರಿಗೆ ಇದು ನೆರವಾಗಲಿದೆ ಈ ಒಡಂಬಡಿಕೆಯು ಎರಡೂ ದೇಶಗಳ ನಡುವೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಹಾಗೂ ಸಾಮಾಜಿಕ ಸಂಯೋಜನೆಗೆ ಪರಸ್ಪರ ಲಾಭದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ.
ಭಾರತ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ ಫಲಿತಾಂಶಗಳನ್ನು ಸಾಧಿಸಲು ಬ್ರಿಟಿಷ್ ಕೌನ್ಸಿಲ್ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಡುವೆ ಸಹಿ ಮಾಡಿರುವ ಒಪ್ಪಂದವು ಸಹಾಯಕವಾಗಲಿದೆ.
ರಾಜ್ಯ ಹಾಗೂ ಯುಕೆನಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ವಿದ್ಯಾರ್ಥಿ ಹಾಗೂ ಭೋದಕ ವರ್ಗದ ವಿನಿಮಯ ಮತ್ತು ಸಂಶೋಧನೆಯನ್ನು ಹೆಚ್ಚಿಸಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಂತರರಾಷ್ಟ್ರೀಕರಣವನ್ನು ಒಡಂಬಡಿಕೆಯು ಬೆಂಬಲಿಸಲಿದೆ. ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಶಿಕ್ಷಣ ಮತ್ತು ಸಂಶೋಧನಾ ಪಾಲುದಾರಿಕೆ, ಬೋಧಕ ವರ್ಗದವರಿಗೆ ನಾಯಕತ್ವ ಅಭಿವೃದ್ಧಿ ಮುಂತಾದ ಕ್ರಮಗಳ ಮೂಲಕ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದರು.
ಯುಕೆ ವಿದೇಶಾಂಗ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಸಚಿವ ಡಾಮಿನಿಕ್ ರಾಬ್, ಬ್ರಿಟಿಷ್ ಕೌನ್ಸಿಲ್ ಅಧಿಕಾರಿಗಳು, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
English summary….
MoU between Govt. of Karnataka and UK on bilateral cooperation in higher educational institutions
Bengaluru, Dec. 17, 2020 (www.justkannada.in): An MoU between the Govt. of Karnataka and UK, on bilateral cooperation in higher educational institutions with the UK was signed in the presence of Chief Minister B.S. Yedyurappa today.
Speaking at his residential office Krishna B.S. Yedyurappa said that a three-year agreement was signed with the British Government on leadership development in higher educational institutions and this is the first of its kind MoU.
Speaking on the occasion Barbara Vikham, Director British Council (India) said this MoU would ensure a strong relationship between Govt. of Karnataka and the UK in terms of education and it will reflect the aspirations of the new National Education Policy – 2020 of the Government of India. It helps in providing the students of Karnataka more higher education and job opportunities and fulfills the aim of the State Government in ensuring quality higher education.
Keywords: Higher Education/ MoU/ Govt. of Karnataka/ UK/ British government
Key words: Agreement -Bilateral Cooperation -Higher Education- Institutions –signed-between – Government of Karnataka – UK.