ಬೆಂಗಳೂರು, ಮಾ,19,2020(www.justkannada.in): ರಾಜ್ಯದಲ್ಲಿರುವ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ, ಹಣಕಾಸಿನ ಸೌಕರ್ಯ ಮತ್ತು ಸೇವಾ ನಿಯಮಕ್ಕೆ ಏಕರೂಪ ಕಾಯಿದೆ ನಿಯಮಕ್ಕೆ ಸಂಬಂಧಿಸಿದ ಏಕರೂಪ ಪರಿನಿಯಮ ರಚನೆಯ ಕುರಿತು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ ಕರಡನ್ನು ಅಂತಿಮಗೊಳಿಸಲಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಎಂ.ಸಿ.ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ ಪಾಟೀಲ್, ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ವ್ಯವಸ್ಥಾಪನಾ ಮಂಡಳಿಗಳ ಅನುಮೋದನೆ ಪಡೆಯಲಾಗಿದೆ. ಕರಡು ಏಕರೂಪ ಪರಿನಿಯಮಕ್ಕೆ ಆರ್ಥಿಕ ಇಲಾಖೆ, ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ(ಸೇವಾ ನಿಯಮಗಳು) ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಗಳ ಅಭಿಪ್ರಾಯವನ್ನು ಕೋರಲಾಗಿದ್ದು, ಈ ಇಲಾಖೆಗಳು ಅಭಿಪ್ರಾಯಗಳು ನೀಡಿದ ಬಳಿಕ ರಾಜ್ಯಪಾಲರ ಅನುಮೋದನೆ ಪಡೆದು ಶೀಘ್ರವಾಗಿ ಏಕರೂಪ ಕಾಯಿದೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಏಕರೂಪ ಪರಿನಿಯಮ ರಚನೆಯ ಪ್ರಕ್ರಿಯೆಯು ಹಲವು ಇಲಾಖೆಗಳೊಂದಿಗೆ ಸಮಾಲೋಚಿಸುವ ಹಾಗೂ ಹಲವು ಹಂತರ ಚರ್ಚೆಗಳನ್ನೊಳಗೊಂಡಿರುವುದರಿಂದ ಇದಕ್ಕೆ ಹೆಚ್ಚಿನ ಸಮಯದ ಅಗತ್ಯವಿರುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
Key words: Agriculture Minister- BC Patil- clarified -Draft -finalization