ಬೆಂಗಳೂರು,ಅಕ್ಟೋಬರ್,14,2020(www.justkannada.in): ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಕೊಪ್ಪಳ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರು.
ಗಂಗಾವತಿ ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ. ಅಲ್ಲದೇ ಜಿಲ್ಲೆಯಯ ಕೃಷಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದೆ.ಜಿಲ್ಲೆಯಲ್ಲಿ ಎರಡು ಕೃಷಿ ಸಂಶೋಧನಾ ಕೇಂದ್ರಗಳು, ಒಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಒಂದು ಕೃಷಿ ವಿಜ್ಞಾನ ಕೇಂದ್ರವಿದ್ದು, ಒಟ್ಟು 19 ವಿಜ್ಞಾನಿಗಳು ಮತ್ತು 20 ಶಿಕ್ಷಕೇತರ ಸಿಬ್ಬಂದಿಗಳಿದ್ದು, ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಬೇಕಾದ ಎಲ್ಲಾ ರೀತಿಯ ಅನುಕೂಲವನ್ನು ಹೊಂದಿರುತ್ತದೆ ಎಂದು ಸಚಿವ ಬಿ.ಸಿ ಪಾಟೀಲ್ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಕೃಷಿಗೆ ಪೂರಕವಾದ ವಾತಾವರಣವನ್ನು ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಮಹಾವಿದ್ಯಾಲಯದ ಅಗತ್ಯವಿರುತ್ತದೆ. ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಪದವಿ ಹೊಂದಲು 140 ಕಿ.ಮೀ. ದೂರದ ರಾಯಚೂರಿಗೆ ಇಲ್ಲವೇ 220 ಕಿ.ಮೀ ದೂರದಲ್ಲಿರುವ ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಇದರಿಂದ ಕೃಷಿ ಪದವಿ ತಂತ್ರಜ್ಞಾನ ಸಂಬಂಧ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಕೊಪ್ಪಳದಲ್ಲಿಯೇ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಅನುಕೂಲವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಬೇಕಾದ ಭೂಪ್ರದೇಶ ಹಾಗೂ ನೀರಾವರಿ ಸೌಲಭ್ಯವಿರುತ್ತದೆ. ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅಗತ್ಯವಾದ ಪ್ರಯೋಗಾಲಯಗಳು, ವಸತಿ ನಿಲಯ, ವಡ್ಡರಹಳ್ಳಿ ಕ್ಯಾಂಪ್ ಡಿಎಟಿಸಿಯಲ್ಲಿ ಲಭ್ಯವಿದ್ದು, ಇವುಗಳನ್ನು ನೂತನ ಕೃಷಿ ಮಹಾವಿದ್ಯಾಲಯಕ್ಕೆ ಅವಶ್ಯಕತೆಯಿದ್ದಲ್ಲಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಗಂಗಾವತಿ ನಗರವು ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರೈಲು ಹಾಗೂ ಸಾರಿಗೆ ಸಂಪರ್ಕವನ್ನೂ ಸಹ ಹೊಂದಿದೆ. ಇಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಜಿಲ್ಲೆಯ ವಿದ್ಯಾರ್ಥಿ ಹಾಗೂ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.
ಪ್ರಸ್ತಾವನೆ ಸಲ್ಲಿಕೆಗೂ ಮುನ್ನ ವಿಕಾಸಸೌಧದ ಕೃಷಿ ಸಚಿವರ ಕಚೇರಿಯಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪನೆ ಸಂಬಂಧ ಸಭೆ ನಡೆಯಿತು. ಸಭೆಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಶಾಸಕರಾದ ಹಾಲಪ್ಪ ಆಚಾರ್,ಬಸವರಾಜ್ ದಡೆಸಗೂರ್,ಪರಣ್ಣ ಮನವಳಿ ಉಪಸ್ಥಿತರಿದ್ದರು.
Key words: Agriculture Minister -BC Patil -proposed -CM – new Agricultural College – Gangavathi.