ಧಾರವಾಡ, ನವೆಂಬರ್,11,2020(www.justkannada.in): ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಧಾರವಾಡಕ್ಕೆ ಭೇಟಿ ನೀಡಿದ್ದ ಸಚಿವ ಬಿ.ಸಿ ಪಾಟೀಲ್, ಕುಲಪತಿ ಎಂ.ಬಿ.ಚೆಟ್ಟಿಯೊಡಗೂಡಿ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡರು.
ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕೊನೆಯ ಆರು ತಿಂಗಳು ರೂರಲ್ ಅಗ್ರಿಕಲ್ಚರ್ ವರ್ಕ್ ಎಕ್ಸಪೀರಿಯನ್ಸ್ ಪ್ರೋಗ್ರಾಮ್ (ರಾವೆ) ಪಠ್ಯೇತರ ಚಟುವಟಿಕೆಯಿದ್ದು, ಇದರಡಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ತಂಗಿ, ಅಲ್ಲಿನ ರೈತ ಸಂಪರ್ಕ ಕೇಂದ್ರಗಳ ಜೊತೆ ಸೇರಿ ಗ್ರಾಮೀಣ ಭಾಗದ ರೈತರ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಹೊಸಹೊಸ ತಂತ್ರಜ್ಞಾನ, ಕೃಷಿ ಸಂಬಂಧಿತ ಮಾಹಿತಿ ವಿವರಗಳನ್ನು ಹಂಚಿಕೊಳ್ಳಬೇಕಿದೆ.
ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ವಿದ್ಯಾರ್ಥಿಗಳು ಗ್ರಾಮೀಣ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಮಗ್ರ ಕೃಷಿಗೆ ಹೆಚ್ಚು ಒತ್ತು, ಸಾವಯವ ಕೃಷಿ ಹಾಗೂ ರೈತ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
Key words: Agriculture Minister- BC Patil – video conversations – farm students.