ನವದೆಹಲಿ,ಫೆ,26,2020(www.justkannada.in): ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರವನ್ನ ಖಂಡಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಗಲಭೆಯ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಹಿಂಸಾಚಾರ ಪೂರ್ವನಿಯೋಜಿತವಾದದ್ದು. ಹಿಂಸಾಚಾರದ ಹಿಂದೆ ಬಿಜೆಪಿ ಕೈವಾಡವಿದೆ. ಗಲಭೆಗೆ ಬಿಜೆಪಿ ನಾಯಕರಿಂದಲೇ ಪ್ರಚೋದನೆ ಸಿಕ್ಕಿದೆ. ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿದರು. ಇನ್ನು ಕೇಂದ್ರ ಸರ್ಕಾರ, ಪೊಲೀಸರ ವೈಪಲ್ಯದಿಂದ ಹಿಂಸಾಚಾರ ನಡೆದಿದ್ದು ಈ ಹಿಂಸಾಚಾರವನ್ನ ಕಾಂಗ್ರೆಸ್ ಖಂಡಿಸುತ್ತೆ ಎಂದು ಹೇಳಿದರು.
ದೆಹಲಿಯಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಯತ್ನ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸವಾಗುತ್ತಿದೆ. ಇದರಲ್ಲಿ ಕೇಂದ್ರ ಗೃಹ ಸಚಿವರ ವೈಪಲ್ಯ ಎದ್ದು ಕಾಣುತ್ತಿದೆ. ಹಿಂಸಾಚಾರ ತಡೆಯುವಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಗಲಭೆ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಸೋನಿಯಾ ಗಾಂಧಿ ಆಗ್ರಹಿಸಿದರು.
ಹಿಂಸಾಚಾರದ ವೇಳೆ ಗೃಹ ಸಚಿವರು ಎಲ್ಲಿದ್ರು..? ದೆಹಲಿ ಸಿಎಂ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಸೋನಿಯಾ ಗಾಂಧಿ, ಘಟನೆಯಲ್ಲಿ ಮೃತಪಟ್ಟ ಕುಟುಂಬದ ಜತೆ ಕಾಂಗ್ರೆಸ್ ಇರುತ್ತದೆ. ಕೇಂದ್ರ ಸರ್ಕಾರ ತಕ್ಷಣ ಗಲಭೆ ಪೀಡಿತ ಪ್ರದೇಶಗಳಿಗೆ ಭದ್ರತೆ ಹೆಚ್ಚಿಸಲಿ. ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಸಿಎಂ ಭೇಟಿ ನೀಡಿ ಗಲಭೆ ಪೀಡಿತರಿಗೆ ಧೈರ್ಯ ಹೇಳಲಿ ಎಂದು ಒತ್ತಾಯಿಸಿದರು.
Key words: AICC president- Sonia Gandhi – Delhi -Violence -demands -resignation -Union Home Minister-Amit Shah