ಮೈಸೂರು, ಫೆಬ್ರವರಿ 17, 2022 (www.justkannada.in): ಭಾರತೀಯ ವಾಕ್-ಭಾಷಾ ಮತ್ತು ಶ್ರವಣ ಸಂಘದ (MyISHA) ಮೈಸೂರು ಅಧ್ಯಾಯವು ಫೆಬ್ರವರಿ 19 ಹಾಗೂ 20, ರಂದು ಐಷ್ ನ (AIISH) ನಾಲೆಡ್ಜ್ ಪಾರ್ಕ್ ನಲ್ಲಿ 53ನೇ ರಾಷ್ಟ್ರಮಟ್ಟದ ಭಾರತೀಯ ವಾಕ್ -ಭಾಷಾ ಮತ್ತು ಶ್ರವಣ ಸಂಘದ ಸಮಾವೇಶವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಎನ್ಹೆಚ್ಎಂನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಮಿಷನ್ ನಿರ್ದೇಶಕ ವಿಕಾಸ್ ಶೀಲ್, ಭಾ.ಆ.ಸೇ., ಇವರು ಹಾಗೂ ಡಾ. ಆರ್. ಬಾಲಸುಬ್ರಹ್ಮಣ್ಯಂ, ಸದಸ್ಯರು (ಮಾನವ ಸಂಪನ್ಮೂಲ), ಸಾಮರ್ಥ್ಯಾಭಿವೃದ್ಧಿ ಆಯೋಗ, ಭಾರತ ಸರ್ಕಾರ, ನವದೆಹಲಿ, ಸ್ಥಾಪಕರು, ಎಸ್ವಿವೈಎಂ ಹಾಗೂ ಗ್ರಾಂ, ಮೈಸೂರು, ಇವರು ಉದ್ಘಾಟಿಸಲಿದ್ದಾರೆ.
ಡಾ. ಎಂ. ಜಯರಾಂ, ನಿವೃತ್ತ ಮುಖ್ಯಸ್ಥರು, ನಿಮ್ಹಾನ್ಸ್, ಬೆಂಗಳೂರು, ಇವರು ಡಾ. ಕೃಷ್ಣ ವೈ, ಪ್ರಾಧ್ಯಾಪಕರು, ಎಂಎಹೆಚ್ಇ, ಮಣಿಪಾಲ್, ಇವರಿಂದ ISHA ದ ಅಧ್ಯಕ್ಷ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಡಾ. ಎಂ. ಜಯರಾಂ ಅವರು ದೇಶದ ಓರ್ವ ಹಿರಿಯ ಹಾಗೂ ಖ್ಯಾತ ವಾಕ್-ಭಾಷಾ ತಜ್ಞರಾಗಿದ್ದು, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ (ಐಷ್) ಆರು ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಮಾವೇಶದಲ್ಲಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವಂತಹ ಮೂವರು ಖ್ಯಾತನಾಮರನ್ನು ಸನ್ಮಾನಿಸಲಾಗುತ್ತದೆ. ಡಾ. ಎಂ. ಪುಷ್ಪಾವತಿ, ನಿರ್ದೇಶಕರು, ಐಷ್ ಇವರಿಗೆ ಡಾ. ಎನ್. ರತ್ನ ಒರೇಷನ್,ಪ್ರಶಸ್ತಿಯನ್ನು, ಡಾ. ಅಜಿತ್ ಕುಮಾರ್ ಯು, ಶ್ರವಣ ವಿಜ್ಞಾನ ಪ್ರಾಧ್ಯಾಪಕರು ಇವರಿಗೆ ಪ್ರೊ. ಎಸ್. ಕಾಮೇಶ್ವರನ್ ಎಂಡೋಮೆಂಟ್ ಒರೇಷನ್ ಪ್ರಶಸ್ತಿಯನ್ನು ಹಾಗೂ ರಾಜಪಾಂಡಿಯನ್ ಎಸ್. ಇವರಿಗೆ, ಪ್ರೊ. ಆರ್.ಕೆ. ಓಜಾ ಒರೇಷನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ, ಡಾ. ಕಲ್ಯಾಣಿ ಮಂಡ್ಕೆ, ನಿರ್ದೇಶಕಿ, ಮಂಡ್ಕೆ ಹಿಯರಿಂಗ್ ಸರ್ವೀಸಸ್, ಪುಣೆ, ಇವರು, ೨೦೧೧-೧೨ರವರೆಗೆ ISಊಂ ನ ಅಧ್ಯಕ್ಷರಾಗಿ ಸಲ್ಲಿಸಿರುವ ವಿಶೇಷ ಸೇವೆಗಳಿಗೆ ಭರತ್ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಹಾಲಿ ಜಾರಿಯಲ್ಲಿರುವ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಡಿಜಿಟಲ್ ರೂಪದಲ್ಲಿ ನಡೆಸಲಿದ್ದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೃತ್ತಿಪರರೂ ಒಳಗೊಂಡಂತೆ ಸುಮಾರು ೧,೩೦೦ಕ್ಕೂ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಶ್ವದಾದ್ಯಂತ 16 ವಿದ್ವಾಂಸರಿಂದ ಉಪನ್ಯಾಸ, 36 ಮೌಖಿಕ ಸಂಶೋಧನಾ ವಿಷಯ ಮಂಡನೆಗಳು, ಹಾಗೂ 115 ಪೋಸ್ಟರ್ ಮಂಡನೆಗಳಿರುತ್ತವೆ. ವಾಕ್-ಭಾಷಾ ವಿಜ್ಞಾನ ಮತ್ತು ಶ್ರವಣ ವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಣತಜ್ಞರು, ಸಂಶೋಧಕರು ಹಾಗೂ ಅಭ್ಯಾಸನಿರತ ವೃತ್ತಿಪರರು ವಿಷಯ ಮಂಡನೆಗಳನ್ನು ಮಾಡಲಿದ್ದಾರೆ. ಜೊತೆಗೆ ಈ ಸಮಾವೇಶದಲ್ಲಿ ಡಿಜಿಟಲ್ ರೂಪದ ಒಂದು ಪ್ರದರ್ಶನವೂ ಇರುತ್ತದೆ. ಈ ಸಮಾವೇಶದ ಆತಿಥ್ಯವನ್ನು MyISHA ವಹಿಸಿಕೊಂಡಿದೆ.
Key words: AIISH-Mysuru- National Conference