ವಿಜಯಪುರ ಫೆ.15,2021(www.justkannada.in): ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗವಕಾಶ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಸೋಮವಾರ ವಿಜಯಪುರದಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು.
ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯ ಬುರಣಾಪುರ ಹಾಗೂ ಮದಭಾವಿ ಗ್ರಾಮಗಳಲ್ಲಿನ ಸುಮಾರು 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಒಣ ದ್ರಾಕ್ಷಿ ಮತ್ತು ನಿಂಬೆ ಹಣ್ಣನ್ನು ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರಾರಂಭದಿಂದ ಈ ಎಲ್ಲಾ ಚಟುವಟಿಕೆಗಳಿಗೆ ಹೆಚ್ಚಿನ ಮಾರುಕಟ್ಟೆ ಲಭ್ಯವಾಗಲಿದೆ ಎಂದರು.
ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ಕಾರ್ಯಾಚರಣೆಯನ್ನು ಕೇಂದ್ರಿಯ ನಾಗರೀಕ ವಿಮಾನಯಾನ ಸಚಿವಾಲಯದ ಭಾರತೀಯ ವಿಮಾನಯಾನ ಪ್ರಾಧಿಕಾರದೊಂದಿಗೆ ಉಡಾನ್ ಯೋಜನೆ ಅಡಿ ಸೇರ್ಪಡಿಸಲು ಕ್ರಮವಹಿಸಲಾಗುತ್ತಿದೆ. ಕಾಮಗಾರಿಯನ್ನು ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗಿದ್ದು, ಮುಂದೆ ಅದನ್ನು ಏರ್ಬಸ್ -320 ಗಳ ಹಾರಾಟಕ್ಕಾಗಿ ವಿಸ್ತರಿಸುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ, ಜನಸಾಮಾನ್ಯರು ಸಹ ವಿಮಾನಯಾನವನ್ನು ಕೈಗೊಳ್ಳಬಹುದಾಗಿದೆ ಎಂದು ಹೇಳಿದರು.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಅದೇ ರೀತಿ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಬುರಣಾಪೂರ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ವಿಜಯಪುರ ಸಮೀಪದ ಬುರಣಾಪೂರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣ ಶ್ರೀಮಂತರ ಓಡಾಟಕ್ಕೆ ಅಲ್ಲ ಎಂದು ತಿಳಿಸಿದ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.
ಅದರಂತೆ ಲೋಕೋಪಯೋಗಿ ಇಲಾಖೆಯ ಒಟ್ಟು 220 ಕೋಟಿ ರೂ.ಅನುದಾನದಲ್ಲಿ ಈ ವಿಮಾನ ನಿಲ್ದಾಣವನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ತಕ್ಷಣ ವಿಮಾನ ನಿಲ್ದಾಣದ ಕಾಮಗಾರಿಗಳು ಆರಂಭಗೊಳ್ಳಲಿವೆ. ಕಳೆದ 2008 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡಿಯೂರಪ್ಪ ಅವರು ವಿಜಯಪುರ, ಕಲಬುರ್ಗಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವಿಮಾನ ನಿಲ್ದಾಣಗಳಿಗೆ ಅಡಿಗಲ್ಲು ನೆರವೇರಿಸಿದ್ದರು. ಈಗ ಪುನಃ ಅವರೇ ಈ ನಿಲ್ದಾಣಕ್ಕೆ ವರ್ಚುವಲ್ ವೇದಿಕೆಯ ಮೂಲಕ ಚಾಲನೆ ನೀಡಿದ್ದು ಅವರಿಗೆ ಜಿಲ್ಲೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸುವ ಕನಸು ವಿಜಯಪುರ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದು, ಕನಸಾಗಿ ಉಳಿದಿತ್ತು. ಇಂದು ಈ ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆತಿದ್ದು, 1974 ರಿಂದ ಪದೇ ಪದೇ ಸಮೀಕ್ಷೆ ಮತ್ತು ಖರ್ಚು ವೆಚ್ಚ ವರದಿ ಸಲ್ಲಿಸುವಲ್ಲಿಯೇ ದಣಿದುಹೋಗಿದ್ದ ಲೋಕೋಪಯೋಗಿ ಅಧಿಕಾರಿಗಳಿಗೆ ಇಂದು ಸಮಾಧಾನ ದೊರೆತಿದ್ದು, ಒಟ್ಟು 727 ಎಕರೆ ವಿಸ್ತಾರದ ಜಮೀನಿನಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ತಾವು ಕೇಂದ್ರ ಸರ್ಕಾರದ ವಿಮಾನಯಾನ ಸಚಿವರಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿಕೊಂಡಾಗ ವಿಮಾನ ನಿಲ್ದಾಣದ ಕಟ್ಟಡ, ರನ್ ವೇ ಮತ್ತು ಇತರೆ ಕಾಮಗಾರಿಗಳನ್ನು ರಾಜ್ಯ ಸರ್ಕಾರದಿಂದಲೇ ಅನುದಾನ ಭರಿಸುವ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಒಟ್ಟು 95 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 20 ವರ್ಷಗಳ ಹಿಂದೆಯೇ ವಿಜಯಪುರ ಜಿಲ್ಲೆ ತೋಟಗಾರಿಕಾ ಜಿಲ್ಲೆ ಎಂದು ಘೋಷಣೆ ಮಾಡಿತ್ತು. ಉತ್ತಮ ಹವಾಮಾನ, ಭೂಮಿ, ನೀರು, ತೋಟಗಾರಿಕಾ ಕ್ಷೇತ್ರ ಮತ್ತು ನೀರಾವರಿ ಹೊಂದಿರುವುದರಿಂದ ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಉತ್ತರ ಕರ್ನಾಟಕದಲ್ಲಿಯೇ ಮುಂಚೂಣಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಲಿದೆ ಎಂದು ತಿಳಿಸಿದ ಅವರು ಈ ವಿಮಾನ ನಿಲ್ದಾಣದ ಸ್ಥಾಪನೆಯಿಂದ ಈ ಭಾಗದ ಭೂಮಿಗೆ ಹೆಚ್ಚಿನ ಮಹತ್ವ ಬರಲಿದೆ. ನಿಲ್ದಾಣಕ್ಕಾಗಿ ಭೂಮಿ ಒದಗಿಸಿದ ಅಲಿಯಾಬಾದ, ಬುರಣಾಪುರ ಹಾಗೂ ಮದಬಾವಿ ಗ್ರಾಮಗಳ ರೈತರಿಗೂ ಕೂಡ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಜಾರಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಶೈಲೇಂದ್ರ ವಿಮಾನ ನಿಲ್ದಾಣದ ಕಾಮಗಾರಿಗಳ ಬಗ್ಗೆ ವಿವರ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದೇವಾನಂದ ಚವ್ಹಾಣ ಅವರು ನಿಗದಿತ ಅವಧಿಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ಈ ಭಾಗದ ಜನರಿಗೆ ಸಹಕಾರಿಯಾಗಲಿ ಎಂದು ಹಾರೈಸಿದರು. ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ (ಸಾಸನೂರ), ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮದಬಾವಿ ಗ್ರಾ.ಪಂ ಅಧ್ಯಕ್ಷರಾದ ಚೇತನ ಬಗಲಿ, ಐನಾಪೂರ ಗ್ರಾ.ಪಂ ಅಧ್ಯಕ್ಷ ಯಲ್ಲಕ್ಕ ವಂಬಾಸೆ, ಅಲಿಯಾಬಾದ ಗ್ರಾ.ಪಂ ಅಧ್ಯಕ್ಷ ರಾವಣ ಹಕ್ಕೆ ಮುಂತಾದವರು ಉಪಸ್ಥಿತರಿದ್ದರು.
Key words: airport-Vijayapur- district – all-round- development-CM BS Yeddyurappa