ಬೆಂಗಳೂರು,ಸೆಪ್ಟಂಬರ್,30,2020(www.justkannada.in): ‘ಎಲ್ಲ ಚುನಾವಣೆಗಳು ಕೂಡ ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯಾಗಿರುತ್ತದೆ. ಯಾವುದೇ ಒಂದು ಕ್ಷೇತ್ರದ ಚುನಾವಣೆ ಮಾತ್ರ ಪ್ರತಿಷ್ಠೆಯಾಗುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು, ‘ಪ್ರಮುಖ ಚುನಾವಣೆ ಆಗಲಿ ಉಪ ಚುನಾವಣೆ ಆಗಲಿ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯೇ. ಈ ಹಿಂದೆ ಹೇಗೆ ಚುನಾವಣೆಗಳನ್ನು ನಡೆಸಿದ್ದೇವೋ ಅದೇ ರೀತಿ ಈ ಚುನಾವಣೆಯನ್ನು ನಡೆಸುತ್ತೇವೆ. ನಾನು ಅಧ್ಯಕ್ಷನಾದರೂ ಪಕ್ಷದ ಕಾರ್ಯಕರ್ತ. ಕೇವಲ ಶಿರಾ ಕ್ಷೇತ್ರವಾಗಲಿ, ರಾಜರಾಜೇಶ್ವರಿ ನಗರ ವಾಗಲಿ ಮಾತ್ರ ಪ್ರತಿಷ್ಠೆ ಆಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೋರಿ ಅರ್ಜಿಗಳು ಬಂದಿವೆ. ನಾವು ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಜೆಡಿಎಸ್ ಒಂದು ಪಕ್ಷವಾಗಿದ್ದು, ಅವರು ಅವರ ರಾಜಕಾರಣ ಮಾಡುತ್ತಾರೆ. ನಾವು ನಮ್ಮ ರಾಜಕಾರಣ ಮಾಡುತ್ತೇವೆ. ಅದೇ ರೀತಿ ಅವರ ಚುನಾವಣೆ ಅವರು ಮಾಡುತ್ತಾರೆ, ನಮ್ಮ ಚುನಾವಣೆ ನಾವು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ನಮ್ಮ ನಾಯಕರು ಹಾಗೂ ವಕ್ತಾರರು ಪ್ರತಿಕ್ರಿಯೆ ನೀಡುತ್ತಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಲೂಟಿ ಹೊಡೆದಿರೋದು ಸರ್ಕಾರ ಮತ್ತು ಮಂತ್ರಿಗಳು:
ಕೊರೋನಾ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದು ನಾವು ಹೇಳಿಲ್ಲ. ಸರ್ಕಾರ ಹಾಗೂ ಮಂತ್ರಿಗಳು ಲೂಟಿ ಮಾಡಿದ್ದಾರೆ. ನಿಮಗೆ ಕೇವಲ ಅಧಿಕಾರಿಗಳು ಕಾಣಿಸುತ್ತಿದ್ದಾರಾ? ನಾವು ಸದನದಲ್ಲೂ ಇದನ್ನೇ ಹೇಳಿದ್ದೇವೆ. ಪಿಪಿಇ ಕಿಟ್ ನಿಂದ ಚಿಕಿತ್ಸಾ ಸಲಕರಣೆಗಳ ಖರೀದಿವರೆಗೂ, ಹಾಸಿಗೆಯಿಂದ ಕಾರ್ಮಿಕರ ಊಟದ ಬಿಲ್ ವರೆಗೂ, ಆಂಬುಲೆನ್ಸ್ ನಿಂದ ಆಹಾರ ಕಿಟ್ ವರೆಗೂ ಹೀಗೆ ಪ್ರತಿ ವಿಚಾರದಲ್ಲಿ ಸರ್ಕಾರ ಲೂಟಿ ಹೊಡೆದಿದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.
Key words: All elections – prestige – parties- KPCC President -DK Sivakumar.