ಮಂಡ್ಯ, ಅಕ್ಟೋಬರ್,28,2022(www.justkannada.in): ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ಧ ಕಾರ್ಯಕ್ರಮಗಳನ್ನ ಬಿಜೆಪಿಯವರು ನಿಲ್ಲಿಸಿದ್ಧಾರೆ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ..? ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲೂಕಿನ ತಿರುಮಲಾಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜನತೆ ಆಶೀರ್ವಾದ ಮಾಡಿದ್ದರಿಂದ 5 ವರ್ಷ ಸಿಎಂ ಆಗಿದ್ದೆ. ಯಾರಿಂದಲೂ ಛೀ ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 158 ಭರವಸೆಗಳನ್ನ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಕೆಲವೇ ಜಾತಿಗಳಿಗೆ ಸೀಮಿತವಾದ ಅಧಿಕಾರ ಮಾಡಲಿಲ್ಲ ಎಂದರು.
ಅಕ್ಕಿ, ಹಾಲು, ಶೂ, ಸಮವಸ್ತ್ರ ಎಲ್ಲಾ ಧರ್ಮ, ಜಾತಿವರಿಗೂ ಉಪಯೋಗ ಆಗಿತ್ತು. ಈವತ್ತು ಎಲ್ಲವನ್ನೂ ಬಿಜೆಪಿಯವರು ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ಸ್ಕಾಲರ್ ಶಿಪ್ ಕೊಟ್ಟಿಲ್ಲ. SC, ST ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಆದರೂ SC, STಗಳ ಬಗ್ಗೆ ಮಾತನಾಡಲಿಕ್ಕೆ ಇವರಿಗೆ ಯಾವ ನೈತಿಕತೆ ಇದೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರೋದೇ ಹಿಂಬಾಗಲಿನಿಂದ.ಹಿಂಬಾಗಿಲಿಂದ ಬಂದವರನ್ನು ಮುಂಬಾಗಲಿಂದಲೇ ಓಡಿಸೋಣ. ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕಾ..? ನಾವು ಅಧಿಕಾರಕ್ಕೆ ಬಂದ್ರೆ ಜನೋಪಯೋಗಿ ಕೆಲಸ ಮಾಡ್ತೇವೆ. ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಬಂದ್ರೆ ಫ್ಯಾಕ್ಟರಿ ಓಪನ್ ಮಾಡ್ತೀವಿ ಎಂದು ಭರವಸೆ ನೀಡಿದರು.
ದೇವರು ಎಲ್ಲಾ ಕಡೆ ಇದ್ಧಾನೆ ಅನ್ನೋದನ್ನ ತಿಳ್ಕೊಂಡಿದ್ದೇವೆ. ಬರೀ ಗುಡಿಯಲ್ಲಿ ಅಷ್ಟೇ ಅಲ್ಲ. ದೇವರು ನಮ್ಮಲ್ಲೂ ಇದ್ದಾನೆ. ನಾವು ನಿತ್ಯ ಮಾಡುವ ಕೆಲಸವನ್ನ ದೇವರು ನೋಡ್ತಿರ್ತಾನೆ. ದೇಗುಲ ಕಟ್ಟೆದರೆ, ಪ್ರತಿಮೆ ಸ್ಥಾಪಿಸಿದರೆ ಸಾಲದು. ಸತ್ಯವಂತರಾಗಿ ನಡೆದುಕೊಳ್ಳಬೇಕು. ಅದಕ್ಕೆ ಸತ್ಯವೇ ಸ್ವರ್ಗ, ನಿತ್ಯವೇ ನರಕ ಅನ್ನೋದು. ಸ್ವರ್ಗ, ನರಕ ಎರಡೂ ಇಲ್ಲೇ ಇವೆ. ಹೀಗಾಗಿ ಸತ್ಯದಿಂದ ನಡೆಯಬೇಕು. ಸತ್ಯದಿಂದ ನಡೆದರೆ ಸ್ವರ್ಗ. ಸುಳ್ಳಿನಿಂದ ನಡೆದರೆ ನರಕ. ಕನಕದಾಸರು, ಬಸವಾದಿ ಶರಣರ ವಚನ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ನಮ್ಮವರೆಂದು ಪ್ರೀತಿಯಿಂದ ಪ್ರೀತಿಸಿ. ನಿಜ ಗುಣ ಅಳವಡಿಸಿಕೊಳ್ಳುವುದೇ ದೇವರಿಗೆ ಪ್ರೀತಿ. ನಮಗೋಸ್ಕರ ಅಲ್ಲ, ಎಲ್ಲರಿಗೋಸ್ಕರ ಒಳ್ಳೆಯದನ್ನೇ ಬಯಸಬೇಕು. ಆಗ ಮಾತ್ರ ದೇವರು ಮೆಚ್ಚಲು ಸಾಧ್ಯ ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: All – programs – stopped-BJP-Former CM-Siddaramaiah