ಬೆಂಗಳೂರು, ಮಾ.21, 2025 : ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ಹಿಡಿದು ಎಳೆಯುವುದು ಮತ್ತು ಓಡಿಹೋಗುವ ಮುನ್ನ ಸಂತ್ರಸ್ತೆಯನ್ನು ಮೋರಿಗೆ ಎಳೆದೊಯ್ಯಲು ಪ್ರಯತ್ನ ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನದ ಅಪರಾಧ ಆಗುವುದಿಲ್ಲ .
ಹೀಗೆ ಹೇಳಿರುವ ಅಲಹಾಬಾದ್ ಹೈಕೋರ್ಟ್, ಪ್ರಕರಣವೊಂದರಲ್ಲಿನ ಸಮನ್ಸ್ ಆದೇಶವನ್ನು ಮಾರ್ಪಾಡು ಮಾಡಿದೆ.
ಆರೋಪಿಗಳಾದ ಪವನ್ ಮತ್ತು ಆಕಾಶ್ ಎನ್ನುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸ್ ಕಾಯ್ದೆಯ ಸೆಕ್ಷನ್ 18ರ (ಅಪರಾಧ ಎಸಗಲು ಯತ್ನಿಸಿದ್ದಕ್ಕೆ ಶಿಕ್ಷೆ) ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಅವರ ವಿರುದ್ಧದ ಆರೋಪಗಳನ್ನು ಹೈಕೋರ್ಟ್ ಬದಲಾಯಿಸಿದ್ದು, ಐಪಿಸಿ ಸೆಕ್ಷನ್ 354-ಬಿ (ಬಟ್ಟೆ ಬಿಚ್ಚಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), ಪೋಕ್ಸೋ ಕಾಯ್ದೆಯ ಸೆಕ್ಷನ್ 9, 10ರ (ತೀವ್ರ ಸ್ವರೂಪದ ಲೈಂಗಿಕ ಹಲ್ಲೆ) ಅಡಿ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು ಎಂಬ ಆದೇಶ ನೀಡಿದೆ ಎಂದು ‘ಬಾರ್ ಆ್ಯಂಡ್ ಬೆಂಚ್’ ಜಾಲತಾಣ ವರದಿ ಮಾಡಿದೆ.
‘ಪವನ್ ಮತ್ತು ಆಕಾಶ್ ಅವರು ಸಂತ್ರಸ್ತೆಯ ಸ್ತನಗಳನ್ನು ಹಿಡಿದರು, ಸಂತ್ರಸ್ತೆಯ ಕೆಳವಸ್ತ್ರವನ್ನು ತೆಗೆಯಲು ಆಕಾಶ್ ಯತ್ನಿಸಿದ್ದರು, ಅದಕ್ಕಾಗಿ ಅವರಿಬ್ಬರು ಸಂತ್ರಸ್ತೆಯ ಕೆಳಉಡುಪಿನ ದಾರವನ್ನು ತುಂಡು ಮಾಡಿದರು, ಆಕೆಯನ್ನು ಮೋರಿಗೆ ಎಳೆದುಕೊಂಡು ಹೋಗಲು ಯತ್ನಿಸಿದ್ದರು, ಆದರೆ ಸಾಕ್ಷಿಯ ಮಧ್ಯಪ್ರವೇಶದ ಕಾರಣದಿಂದಾಗಿ ಅವರು ಸಂತ್ರಸ್ತೆಯನ್ನು ಬಿಟ್ಟು ಓಡಿಹೋದರು ಎಂದು ಆರೋಪಿಸಲಾಗಿದೆ. ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಲು ತೀರ್ಮಾನಿಸಿದ್ದರು ಎಂಬ ನಿರ್ಣಯಕ್ಕೆ ಬರಲು ಈ ಸಂಗತಿಯು ಸಾಕಾಗುವುದಿಲ್ಲ. ಏಕೆಂದರೆ, ಈ ವಿಷಯ ಹೊರತುಪಡಿಸಿದರೆ, ಆರೋಪಿಗಳು ಅತ್ಯಾಚಾರ ನಡೆಸಲು ತೀರ್ಮಾನಿಸಿದ್ದರು ಎಂಬ ಆರೋಪಕ್ಕೆ ಬೇರೆ ಯಾವುದೇ ಕೃತ್ಯವನ್ನು ಉಲೇಖಿಸಲಾಗಿಲ್ಲ’ ಎಂದು ಸಮನ್ಸ್ ಆದೇಶವನ್ನು ಬದಲಿಸುವ ‘ಸಂದರ್ಭದಲ್ಲಿ ನ್ಯಾಯಮೂರ್ತಿ ರಾಮ ಮನೋಹರ ನಾರಾಯಣ ಮಿಶ್ರಾ ಅವರು ಹೇಳಿರುವುದಾಗಿ ‘ಬಾರ್ ಆ್ಯಂಡ್ ಬೆಂಚ್’ ವರದಿ ವಿವರಿಸಿದೆ.
ಪ್ರಾಸಿಕ್ಯೂಷನ್ ಹೊರಿಸಿದ ಆರೋಪಗಳನ್ನು ಗಮನಿಸಿ ವಿಚಾರಣಾ ನ್ಯಾಯಾಲಯವು ಐಪಿಸಿಯ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 18ರ ಅಡಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ದೋಷಾರೋಪ ನಿಗದಿ ಮಾಡುವ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು, ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತ ಇರಬೇಕಾಗಿಲ್ಲ. ವಿಚಾರಣೆ ಮುಂದುವರಿಸಲು ಅಗತ್ಯವಿರುವ ಅಂಶಗಳು ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣುತ್ತಿವೆಯೇ ಎಂಬುದನ್ನು ಅದು ಪರಿಶೀಲಿಸಬೇಕು ಎಂದು ದೂರುದಾರರ ಪರ ವಕೀಲರು ವಾದಿಸಿದ್ದರು.
ಆರೋಪಿಗಳು ಸಂತ್ರಸ್ಥೆಯ ಮೇಲೆ ಅತ್ಯಾಚಾರ ಎಸಗುವ ತೀರ್ಮಾನ ಮಾಡಿದರು ಎಂಬುದನ್ನು ಸೂಚಿಸುವ ಯಾವುದೇ ಅಂಶ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
key words: Grabbing a woman’s breast, untying her paijama , not attempted rape, Allahabad High Court
Grabbing a woman’s breast and untying her paijama is not attempted rape: High Court