ಮೈಸೂರು,ಜೂನ್,12,2021(www.justkannada.in): ಭೂಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ರಾಜೀನಾಮೆ ನೀಡುವಂತೆ ಕರ್ನಾಟಕ ಕಾವಲು ಪಡೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ಕಾವಲು ಪಡೆಯ ಎಂ.ಮೋಹನ್ ಕುಮಾರ್ ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್ ಅವರು ಭೂ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗಂಭೀರವಾಗಿ ಆರೋಪಿಸಿರುವ ಹಿನ್ನಲೆಯಲ್ಲಿ ಈ ಕೂಡಲೇ ರಾಜೀವ್ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕರ್ನಾಟಕ ಕಾವಲು ಪಡೆ ಒತ್ತಾಯಿಸುತ್ತದೆ . ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತಲ ಭೂಮಿಗೆ ಚಿನ್ನದ ಬೆಲೆ ಬಂದಿದೆ . ಇದರಿಂದಾಗಿ ಮೈಸೂರು ಸುತ್ತಮುತ್ತಲಿರುವ ಸರ್ಕಾರಿ ಭೂಮಿಯನ್ನು ಭೂ ಮಾಫಿಯಾ ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುತ್ತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ . ಆದರೆ ಇಂತಹ ಭೂಗಳ್ಳರನ್ನು ಮಟ್ಟ ಹಾಕಿ ಭೂಮಿಯನ್ನು ಕಾಯಬೇಕಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಭೂಮಿ ಒತ್ತುವರಿ ಆರೋಪಕ್ಕೆ ಗುರಿಯಾಗಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ.
ಇನ್ನೂ ಮೈಸೂರು ನಗರದಲ್ಲಿ ಸರ್ಕಾರಿ ಬಡಾವಣೆಗಳಿಗಿಂತ ಖಾಸಗಿ ಬಡಾವಣೆಗಳೇ ಹೆಚ್ಚು . ಈ ಖಾಸಗಿ ಬಡಾವಣೆಗಳ ಬಹುಪಾಲು ಮಾಲೀಕರು ಜನಪ್ರತಿನಿಧಿಗಳೇ ಆಗಿದ್ದಾರೆ . ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಇದುವರೆವಿಗೂ ನಡೆದಿದೆ ಎನ್ನಲಾದ ಎಲ್ಲ ಭೂ ಹಗರಣಗಳ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಆದೇಶಿಸಬೇಕೆಂದು ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ , ಕರ್ನಾಟಕ ಸರ್ಕಾರ ಇವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ . ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಒಮ್ಮೆಲೆಗೆ ಐದು ನೂರಕ್ಕೂ ಹೆಚ್ಚು ಕಡತಗಳು ಅನುಮೋದನೆಗೊಳ್ಳುತ್ತಿರುವುದರ ಬಗ್ಗೆ ಖುದ್ದಾಗಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಗಮನಿಸಿದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ಆಕ್ರಮಗಳು ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದ್ದು , ಸರ್ಕಾರ ಇದರ ತನಿಖೆಗೆ ಕೂಡಲೇ ಆದೇಶಿಸಬೇಕಿದೆ . ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂ ಮಾಫಿಯಾಗಳ ಹಿಡಿತಕ್ಕೆ ಸಿಲುಕಿದದ್ದು , ಅದನ್ನು ರಕ್ಷಿಸಿ ಸರಿ ದಾರಿಯಲ್ಲಿ ಮುನ್ನಡೆಸಬೇಕಾದ ಕರ್ತವ್ಯವು ಸರ್ಕಾರದ ಮೇಲಿದೆ . ಈ ಹಿನ್ನಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಾಜೀವ್ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ಇಲ್ಲಿವರೆವಿಗೂ ಆವರು ಮಾಡಿರುವ ಎಲ್ಲ ಆದೇಶಗಳ ಬಗ್ಗೆ , ಕೈಗೊಂಡಿರುವ ಕಾಮಗಾರಿಗಳು , ಆನುಮೋದನಗಳು ಕುರಿತು ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.
Key words: allegation – land mafia-Muda- President- Rajeev –resignation- demands