ಮೈಸೂರು, ಆಗಸ್ಟ್ 31, 2023 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ, ಇದನ್ನು ರದ್ದಗೊಳಿಸಬೇಕೆಂದು ಕೋರಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 31/7/2023 ಜಾಹೀರಾತು ನೀಡಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಮುಂದಾಗಿದೆ. ಆಗಸ್ಟ್ 30ರಿಂದ ಕರಾಮುವಿ ಅತಿಥಿ ಗೃಹದಲ್ಲಿ ತಡರಾತ್ರಿವರೆಗೂ ಸಂದರ್ಶನ ಪ್ರಕ್ರಿಯೆ ಪ್ರಾರಂಭವಾಗಿದ್ದು ಅವು ಸೆಪ್ಟೆಂಬರ್ 1ರವರೆಗೂ ನಿಗದಿಯಾಗಿದೆ. ಆದರೆ ಕರಾಮುವಿಯ ಈ ತಾತ್ಕಾಲಿಕ ನೇಮಕಾತಿ ಯುಜಿಸಿ ನಿಯಮಾವಳಿ 2018 ಮತ್ತು ಸರ್ಕಾರದ ಆದೇಶಗಳನ್ವಯ ಇರುವುದಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.
ನೇಮಕಾತಿಯಾಗುತ್ತಿರುವ ಹುದ್ದೆಗಳ ಸಂಖ್ಯೆ ನಿಗದಿಯಾಗಿಲ್ಲ. ಎಸ್ ಸಿ-ಎಸ್ಟಿ ಹಾಗೂ ಒಬಿಸಿ ವರ್ಗಗಳಿಗೆ ಮೀಸಲಾತಿ ನಿಗದಿಯಾಗಿಲ್ಲ. ಅರ್ಜಿ ಸಲ್ಲಿಸಲು ಕಡೇ ದಿನಾಂಕ ನಿಗದಿಯಾಗಿಲ್ಲ. ಯುಜಿಸಿ ನಿಯಮಾವಳಿ 2018ಗಳನ್ವಯ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತಿತರ ಪ್ರಕ್ರಿಯೆಗಳನ್ನು ಸರಿಯಾಗಿ ನಡೆಸಿಲ್ಲ. ಹೀಗಾಗಿ ಸದರಿ ಅಧಿಸೂಚನೆಯನ್ವಯ ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕು. ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಲು ಆದೇಶಿಸುವಂತೆ ಬೆಂಗಳೂರು ಮೂಲದ ಅಭ್ಯರ್ಥಿಯೊಬ್ಬರು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲು ಅವಕಾಶವಿಲ್ಲ. ಜತೆಗೆ ಮುಕ್ತ ವಿವಿ 16/8/2023 ರ ಮತ್ತೊಂದು ಅಧಿಸೂಚನೆಯ ಮೂಲಕ 32 ಕಾಯಂ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿ 27/9/2023ಕ್ಕೆ ಕಡೇ ದಿನಾಂಕ ನಿಗದಿಗೊಳಿಸಿದೆ. ರಾಜ್ಯ ಸರ್ಕಾರ 8/8/2023ರ ಆದೇಶದಂತೆ ಮಂಜೂರಾದ ಹುದ್ದೆಗಳಿಗಿಂತ ಅಧಿಕವಾಗಿ ಮಾಡಿಕೊಂಡ ತಾತ್ಕಾಲಿಕ ನೌಕರರನ್ನು ಬಿಡುಗಡೆಗೊಳಿಸಲು ಸೂಚಿಸಿರುವ ಬೆನ್ನಲ್ಲೇ ಕರಾಮುವಿ ತರಾತುರಿಯಲ್ಲಿ ಸಂದರ್ಶನದ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂಬ ಆರೋಪ ಮಾಡಲಾಗಿದೆ.