ಮೈಸೂರು,ಮೇ,4,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಕೈವಾಡವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ ಆತುರ. ಹೀಗಾಗಿ ದಾಖಲೆಗಳಿಲ್ಲದೇ ಆರೋಪ ಮಾಡ್ತಿದ್ದಾರೆ. ಪುರಾವೆ ಇಲ್ಲದೇ ಬಿಜೆಪಿ ನಾಯಕರ ಮೇಲೆ ಆರೋಪ ಮಾಡಲಾಗ್ತಿದೆ. ಕಾಂಗ್ರೆಸ್ ನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪಿಎಸ್ಐ ಹಗರಣವನ್ನು ಸಿಎಂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಮುಂದಾಗಿದೆ. ಈ ರೀತಿ ತಮ್ಮ ಹುಳುಕನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ಆರೋಪ ಮಾಡ್ತಿದೆ ಎಂದು ಸಚಿವ ಅಶ್ವಥ್ ನಾರಾಯಣ್ ರನ್ನ ಸಮರ್ಥಿಸಿಕೊಂಡರು.
ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಹಿರಿಯ ನಾಯಕರ ಒಲವು ಹೆಚ್ಚಾಗಿದೆ. ಈ ಬಾರಿ ವಿಶೇಷ ಕಾಳಜಿ ವಹಿಸಿ ಇಲ್ಲಿ ಚುನಾವಣೆ ನಡೆಸಲಿದ್ದೇವೆ. ನನಗೂ ಮೈಸೂರು ಭಾಗದ ಮೇಲೆ ಹೆಚ್ಚು ಒಲವಿದೆ. ಹಲವು ಕಾರಣಗಳಿಂದ ಈ ಭಾಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ಬಾರಿ ಮೈಸೂರು ಭಾಗದಲ್ಲಿ ಹೆಚ್ಚು ಕೆಲಸ ಮಾಡುತ್ತೇನೆ. ಹೆಚ್ಚು ಸ್ಥಾನಗಳನ್ನ ಗೆದ್ದು ಅಧಿಕಾರ ಹಿಡಿಯೋದು ನಮ್ಮ ಗುರಿ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿರುವ ಕಾರಣಕ್ಕೆ 120ಸ್ಥಾನ ಗೆದ್ದು ನಾವೂ ಅಧಿಕಾರಕ್ಕೆ ಬರ್ತಿವಿ ಅಂತಾರೆ. ಅದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಉತ್ತಮರಿಗೆ ಜನರು ಅಧಿಕಾರವನ್ನ ನೀಡ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
Key words: Allegations -without –documents congress-BY Vijayendra