ಮಧ್ಯಂತರ ಗುಮ್ಮ ದೇವೇಗೌಡರ ಮರ್ಮ: ಸಂಚಲನ ಸೃಷ್ಟಿಸಿದ ದೇವೇಗೌಡರ ನಿಗೂಢ ರಾಜಕೀಯ ನಡೆ

ಬೆಂಗಳೂರು: ಜೂ-23: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಿಡಿಸಿರುವ ಮಧ್ಯಂತರ ಚುನಾವಣೆ ಬಾಂಬ್ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಹೇಳಿಕೆ ಬಗ್ಗೆ ಸಿಡಿಮಿಡಿಗೊಂಡಿದ್ದಾರೆ.

ದೇವೇಗೌಡರ ರಾಜಕೀಯ ನಡೆಯೇ ನಿಗೂಢ. ಅವರು ಯಾವುದೇ ಮಾತನ್ನಾಡಿದರೂ ಅದರಲ್ಲೊಂದು ರಾಜಕೀಯ ತಂತ್ರ ಅಡಗಿರುತ್ತದೆ. ಇದು ಅವರ ರಾಜಕೀಯ ಚದುರಂಗದಾಟ. ಬಹಳ ಹತ್ತಿರದವರಿಗೆ ಮಾತ್ರ ಗೌಡರು ಉರುಳಿಸುವ ದಾಳದ ಮರ್ಮ, ಬಿಡುವ ಬಾಣದ ಬಿರುಸು ಅರ್ಥವಾಗುತ್ತದೆ. ಸಾಮಾನ್ಯರು ಇದನ್ನು ಗ್ರಹಿಸುವುದು ಕಷ್ಟ. ಅದೇ ರೀತಿ ಮಧ್ಯಂತರ ಚುನಾವಣೆ ಕುರಿತ ಹೇಳಿಕೆ ಬಗ್ಗೆಯೂ ಅಭಿಪ್ರಾಯಗಳು ಬರುತ್ತಿದ್ದು, ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಯಾವ ರೀತಿ ಅಭಿಪ್ರಾಯ ಬರಬಹುದು ಎಂಬುದನ್ನು ತಿಳಿಯಲು ಗೌಡರು ಈ ಬಾಣ ಬಿಟ್ಟರೋ ಅಥವಾ ಮೈತ್ರಿ ನಡೆಯಲ್ಲಿ ಕಾಂಗ್ರೆಸ್​ಗೆ

ಬೆದರಿಕೆಯಾಗಿ ಈ ಬಾಂಬ್ ಸಿಡಿಸಿದರೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ‘ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ನಮಗೂ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ಮುಖಂಡರ ಕೈಯಲ್ಲಿದೆ’ ಎಂಬ ಮಾರ್ವಿುಕ ಮಾತುಗಳ ಜತೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ ಎಂದದ್ದು ಮೈತ್ರಿ ಪಕ್ಷಗಳ ಶಾಸಕರಲ್ಲಿ ತಳಮಳ ಉಂಟು ಮಾಡಿರುವುದಂತೂ ಸುಳ್ಳಲ್ಲ.

ಒಂದು ಕಲ್ಲಿನಲ್ಲಿ ಎರಡು-ಮೂರು ಹಕ್ಕಿ ಹೊಡೆಯುವುದು ಗೌಡರ ರಾಜಕೀಯ ತಂತ್ರಗಾರಿಕೆ. ಒಂದು ವೇಳೆ ಮೈತ್ರಿ ಮುರಿದು ಬಿದ್ದರೆ ಮುಂದೇನಾಗಬಹುದು, ಅದಕ್ಕೆ ಸಾರ್ವಜನಿಕ ವಲಯದಿಂದ ಜನಮತ ಸಂಗ್ರಹ ಹಾಗೂ ರಾಜಕೀಯ ವಲಯದಿಂದ ಯಾವ ಅಭಿಪ್ರಾಯ ವ್ಯಕ್ತವಾಗಬಹುದು ಎಂಬುದನ್ನು ಅರಿತು ಅದರ ಮೇಲೆ ಮುಂದಿನ ರಾಜಕೀಯ ಹೆಜ್ಜೆ ಇಡಲು ಈ ಬಾಣ ಬಿಟ್ಟಿರುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ವಲಯದ ಒಂದು ವಾದ.

ಮುನಿಸಿಗೆ ಕಾರಣ

ಸರ್ಕಾರ ಮುನ್ನಡೆಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಸಿಎಂ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಒಳಗಾಗಿ ಶರಣಾಗಿ ಬಿಡುತ್ತಾರೆ. ಜೆಡಿಎಸ್​ಗೆ ನ್ಯಾಯಯುತವಾಗಿ ಸಲ್ಲಬೇಕಾದ ಬಹುತೇಕ ಸ್ಥಾನಗಳನ್ನು ಒಂದೊಂದಾಗಿ ಕಾಂಗ್ರೆಸ್​ಗೆ ಬಿಟ್ಟುಕೊಡುತ್ತಿ ದ್ದಾರೆ. ಇದು ದೇವೇಗೌಡರ ಮುನಿಸಿಗೆ ಮುಖ್ಯ ಕಾರಣ ಆಗಿದೆ ಎನ್ನಲಾಗಿದೆ.

ಕಾಂಗ್ರೆಸ್ ನಂಬಿ ಕೆಟ್ಟ ಗೌಡರು

ಮೈತ್ರಿ ಸರ್ಕಾರ ಒಂದು ವರ್ಷ ಪೂರೈಸುವುದರ ಒಳಗಾಗಿಯೇ ಜೆಡಿಎಸ್ ಹೈರಾಣಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಮಾತು ನಂಬಿ ಖುದ್ದು ದೇವೇಗೌಡರೇ ಸೋಲು ಕಂಡದ್ದಾಯಿತು. ಅಧಿಕಾರ ಹಂಚಿಕೆ ವಿಚಾರದಲ್ಲಿ ಮಾಡಿಕೊಂಡ ಒಡಂಬಡಿಕೆಯಂತೆ ಒನ್ ಥರ್ಡ್ ಪಾಲಿಸಿ ಪಾಲನೆಯಾಗುತ್ತಿಲ್ಲ. ಮಂತ್ರಿ ಸ್ಥಾನ ಸೇರಿ ಜೆಡಿಎಸ್ ಪಾಲಿನ ಒಂದೊಂದೇ ಹುದ್ದೆಗಳು ಕಾಂಗ್ರೆಸ್ ಕೈ ಸೇರುತ್ತಿವೆ. ಜತೆಗೆ ಕಾಂಗ್ರೆಸ್ ಶಾಸಕರು ಸರ್ಕಾರ ಸುಸೂತ್ರವಾಗಿ ನಡೆಯಲು ಬಿಡುತ್ತಿಲ್ಲ. ಒಬ್ಬರಾದ ಮೇಲೊಬ್ಬರಂತೆ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.

ಕೆಪಿಎಸ್​ಸಿ, ಕೆಎಸ್​ಪಿಸಿಬಿನೂ ಇಲ್ಲ

ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ತಮ್ಮ ಪಾಲಿನ ಒಂದು ಸ್ಥಾನವನ್ನು ಕಿತ್ತುಕೊಂಡಿದೆ. ಇನ್ನೊಂದು ಮಂತ್ರಿ ಹುದ್ದೆಯನ್ನು ಕೇಳುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗ ಕಾಂಗ್ರೆಸ್​ಗೆ , ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಜೆಡಿಎಸ್​ಗೆ ಎಂದು ಒಡಂಬಡಿಕೆಯಾಗಿತ್ತು. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಆಗಿದ್ದ ನೇಮಕ ರದ್ದುಪಡಿಸಿ ಕಾಂಗ್ರೆಸ್​ನವರಿಗೆ ಬಿಟ್ಟುಕೊಡಬೇಕಾದ ಸಂದರ್ಭ ಸೃಷ್ಟಿಯಾಯಿತು. ಈಗ ಕೆಪಿಎಸ್​ಸಿಯನ್ನೂ ತಾನೇ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹವಣಿಸುತ್ತಿದ್ದಾರೆ. ಹಾಗಾಗಿ ಎರಡೂ ಪ್ರಮುಖ ಹುದ್ದೆಗಳು ಜೆಡಿಎಸ್ ಕೈತಪ್ಪುವುದು ನಿಶ್ಚಿತವಾಗಿದೆ. ಇದು ದೇವೇಗೌಡರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಿದೆ ಎಂದು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

79 ಶಾಸಕರಲ್ಲಿ 62 ಮಂದಿಗೆ ಹುದ್ದೆ!

ಕಾಂಗ್ರೆಸ್​ನಲ್ಲಿ ಒಟ್ಟು 79 ಶಾಸಕರಿದ್ದು, ಡಿಸಿಎಂ, ಮಂತ್ರಿಗಿರಿ, ಸಂಸದೀಯ ಕಾರ್ಯದರ್ಶಿ, ನಿಗಮ-ಮಂಡಳಿ ಸೇರಿ 62 ಶಾಸಕರಿಗೆ ಒಂದಲ್ಲ ಒಂದು ಹುದ್ದೆ ಸಿಕ್ಕಿವೆ. ಆದರೂ ಇನ್ನೂ ಅಸಮಾಧಾನ, ಕಿರಿಕಿರಿ, ಒತ್ತಡ ತಂತ್ರ ನಿಂತಿಲ್ಲ. ಇದು ಜೆಡಿಎಸ್ ವರಿಷ್ಠರ ನಿದ್ದೆಗೆಡಿಸಿದೆ.

ಚಟುವಟಿಕೆ ಕೇಂದ್ರವಾದ ಸಿದ್ದರಾಮಯ್ಯ ನಿವಾಸ

ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದೆ. ಶನಿವಾರ ಸಚಿವ ಕೆ.ಜೆ. ಜಾರ್ಜ್, ಪಿ.ಟಿ. ಪರಮೇಶ್ವರ ನಾಯ್್ಕ ಆರ್. ಶಂಕರ್, ಇತರರು ಸಿದ್ದರಾಮಯ್ಯ ಜತೆ ಮುಂದಿನ ಬೆಳವಣಿಗೆಗಳ ಬಗ್ಗೆ ರ್ಚಚಿಸಿದರು.

ಖಾತೆ ಬೇಗ ಆಗಬಹುದು: ಸಚಿವ ನಾಗೇಶ್​ಗೆ ಖಾತೆ ಹಂಚಿಕೆ ಸಮಸ್ಯೆ ಇರುವುದರಿಂದ ತಡವಾಗಿರಬೇಕೆಂದು ಸಚಿವ ಆರ್. ಶಂಕರ್ ಹೇಳಿದರು. ನನಗೆ ಯಾವ ಖಾತೆ ಎಂಬುದು ನಿರ್ಧಾರವಾಗಿದೆ. ಮುಖ್ಯಮಂತ್ರಿಗಳಿಗೆ ಬಿಡುವಿಲ್ಲದ ಕಾರಣ ನಾಗೇಶ್ ಖಾತೆ ಯಾವುದು ಎಂಬುದು ತೀರ್ವನವಾಗಿಲ್ಲ. ಬಹುತೇಕ ಸೋಮವಾರದೊಳಗೆ ಅಂತಿಮವಾಗಲಿದೆ ಎಂದರು.

ಪಕ್ಷ ಸಂಘಟನೆಗೆ ಜೆಡಿಎಸ್ ಪಾದಯಾತ್ರೆ

ಬೆಂಗಳೂರು: ಪಕ್ಷ ಸಂಘಟನೆಗಾಗಿ ವಿಕಾಸ ಹಾಗೂ ವಿಶ್ವಾಸ ಎಂಬ ಹೆಸರಿನಲ್ಲಿ ಜೆಡಿಎಸ್ ಪಾದಯಾತ್ರೆ ನಡೆಸಲಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನಿಂದ ಹೊರಬರಲು ವಿವಿಧ ಚಟುವಟಿಕೆ ಕೈಗೊಂಡಿದ್ದು, ಚುನಾವಣೆಯಲ್ಲಿ ಸೋಲು ಕಂಡರೂ ಧೃತಿಗೆಡದ ದೇವೇಗೌಡರು ನಿರಂತರವಾಗಿ ಸಭೆ, ಸಮಾವೇಶ ಆಯೋಜನೆಗೆ ಮುಂದಾಗಿದ್ದಾರೆ. ಈಗಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರ ಸಭೆ ನಡೆಸಲಾಗಿದೆ. ಯುವಕರನ್ನು ಗುರಿಯಾಗಿಸಿಕೊಂಡು ಆಗಸ್ಟ್ ನಿಂದ ಎರಡು ಹಂತದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸಲು ಪೂರ್ವ ತಯಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರೆ ವರೆಗೆ, 2 ನೇ ಹಂತದಲ್ಲಿ ತುಂಗಭದ್ರೆಯಿಂದ ಮಲಪ್ರಭೆ ವರೆಗೆ ಎರಡು ಹಂತದಲ್ಲಿ ಪಾದಯಾತ್ರೆ ನಡೆಸಿ ಜನರನ್ನು ತಲುಪುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂಬಂಧ ಜೂ.29 ರಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ನೇತೃತ್ವದಲ್ಲಿ ಖಾಸಗಿ ಹೋಟೆಲ್​ನಲ್ಲಿ ಪಾದಯಾತ್ರೆ ಸಿದ್ಧತಾ ಸಭೆ ನಡೆಯಲಿದೆ.

ಬರುವ ತಿಂಗಳು ಮಹಿಳಾ ಸಮಾವೇಶ

ಮುಂದಿನ ತಿಂಗಳು 50 ಸಾವಿರ ಹೆಣ್ಣು ಮಕ್ಕಳನ್ನು ಸೇರಿಸಿ ಸಭೆ ಮಾಡಿ ಪಕ್ಷ ಸಂಘಟಿಸುವುದಾಗಿ ದೇವೇಗೌಡ ಹೇಳಿದರು. ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಹಿಳಾ ಸಮಾವೇಶದ ಪೂರ್ವ ಸಿದ್ಧತೆ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಆಯ್ಕೆ ಕುರಿತ ಸಭೆಯಲ್ಲಿ ಮಾತನಾಡಿ, ಮಹಿಳಾ ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಕಾರ್ಯಾಧ್ಯಕ್ಷರು, ಅಧ್ಯಕ್ಷರ ನೇಮಿಸುತ್ತೇವೆ ಎಂದರು. ಪಕ್ಷ ಸಂಘಟನೆಯಲ್ಲಿ ಮಹಿಳೆಯರಿಗಾಗುತ್ತಿರುವ ಸಮಸ್ಯೆ, ಅವಕಾಶಗಳ ಕೊರತೆ ಬಗ್ಗೆ ಸಭೆಯಲ್ಲಿ ಮಹಿಳಾ ನಾಯಕಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.

ಕೃಪೆ:ವಿಜಯವಾಣಿ

ಮಧ್ಯಂತರ ಗುಮ್ಮ ದೇವೇಗೌಡರ ಮರ್ಮ: ಸಂಚಲನ ಸೃಷ್ಟಿಸಿದ ದೇವೇಗೌಡರ ನಿಗೂಢ ರಾಜಕೀಯ ನಡೆ
alliance-government-h-d-kumaraswamy-h-d-devegowda-interim-election-jds-siddaramaiah-congress