ಬೆಂಗಳೂರು,ಫೆಬ್ರವರಿ,15,2023(www.justkannada.in): ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಟೆಂಡರ್ ಕರೆಯುತ್ತಿದ್ದು, ಎರಡು ಪಟ್ಟು ಹೆಚ್ಚು ಮೊತ್ತಕ್ಕೆ ಎಸ್ಟಿಮೇಟ್ ಮಾಡುತ್ತಿದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು, ಗುತ್ತಿಗೆದಾರರನ್ನು ಸೆಟ್ ಮಾಡಲು ಶಾಸಕರಿಗೆ ಹಂಚಿಬಿಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಶಾಸಕರು, ಮಂತ್ರಿಗಳಿಗೆ ಟೆಂಡರ್ ಹಂಚಲಾಗಿದೆ. ಸಚಿವ ಸ್ಥಾನ ಸಿಗದವರಿಗೆ ಟೆಂಡರ್ ಮೂಲಕ ಸಮಾಧಾನ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ಬಿಲ್ ಗಳು ಈಗಲೂ ಪೆಂಡಿಂಗ್ ಇವೆ. ಬಿಡಿಎನಲ್ಲಿ 3500 ಎಕರೆಗೆ ಟೆಂಡರ್ ಕರೆಯಲಾಗಿದೆ. 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು.
ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಸೆಷನ್ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. “ಮಂತ್ರಿ ಮಾಡದೇ ಇರುವವರಿಗೆ 2-3 ಸಾವಿರ ಕೋಟಿ ಕೆಲಸ ಅಂತ ಟೆಂಡರ್ ಹಂಚಿಕೆ ಮಾಡುತ್ತಾ ಇದ್ದಾರೆ. ನಮಗೆ ಅದೇ ಶಾಸಕರು ಮಾಹಿತಿ ಕೊಡುತ್ತಿದ್ದಾರೆ. ಸಾವಿರಾರು ಕೋಟಿ ರೂ ಮೊತ್ತದ ಹಳೆಯ ಕೆಲಸದ ಬಿಲ್ ಬಾಕಿ ಉಳಿದುಕೊಂಡಿದ್ದರೂ ಹೊಸ ಟೆಂಡರ್ಗಳನ್ನು ಹಂಚಲಾಗುತ್ತಿದೆ. ಯಾರು ಮುಂಚಿತವಾಗಿ ಹಣ ತಲುಪಿಸುತ್ತಾರೋ ಅವರಿಗೆ ಕೆಲಸದ ಹಂಚಿಕೆ ಮಾಡುತ್ತಿದ್ದಾರೆ. ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
Key words: Allotment – tenders – Govt- Twice – amount –fixed-DK Shivakumar.