ಮೈಸೂರು,ಏಪ್ರಿಲ್,03,2021(www.justkannada.in) : ರಾಜಕೀಯ ಮತ್ತು ಸಾಮಾಜಿಕ ಕಳಕಳಿ ಬೇರೆ, ಬೇರೆ. ರಾಜಕೀಯದಲ್ಲಿ ಪಕ್ಷಾಂತರಿಯಾಗಿರಬಹುದು. ಆದರೆ, ತತ್ವಾಂತರಿಯಾಗಿಲ್ಲ. ಯಾವುದೇ ರಾಜಿ, ಮುಲಾಜಿಗೆ ಒಳಗಾಗಿಲ್ಲ. ಅನ್ಯಾಯವಾದಾಗ ಸಿಡಿದೇಳುವುದು ನನ್ನ ಸ್ವಭಾವ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಒಡನಾಡಿ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ “ನೊಂದ ಮಹಿಳೆಯರ ಧ್ವನಿಯಾಗಿ ಅಂಬೇಡ್ಕರ್” ಮತ್ತು ಸ್ಟ್ಯಾನ್ಲಿ ಪರಶು ಅವರ “ಒಡನಾಡಿಯ ಒಡಲಾಳ ಪುಸ್ತಕ ಬಿಡುಗಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪಕ್ಷ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಹೋರಾಟ, ತತ್ವ ಸಂಬಂಧಿಸಿದಂತೆ ಹೋರಾಟದಿಂದ ಬಂದವನು ನಾನು. ಸಾಮಾಜಿಕ ಕಳಕಳಿಯಿದೆ. ಅಂಬೇಡ್ಕರ್ ಕನಸು ನನಸು ಮಾಡುವ ಮನಸ್ಸಿದೆ. ಜೀವನದ ಕೊನೆಯ ಉಸಿರಿನವರೆಗೆ ಈ ತತ್ವವನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಮಾನವ ಸಾಗಾಣಿಕೆಯು ಸಾಮಾಜಿಕ ಪಿಡುಗಾಗಿದ್ದು, ಅದನ್ನು ತೊಡೆಯುವ ನಿಟ್ಟಿನಲ್ಲಿ ಒಡನಾಡಿ ಸೇವಾ ಸಂಸ್ಥೆ ಶ್ರಮಿಸುತ್ತಿದೆ. ಬಹಳಷ್ಟು ಸವಾಲುಗಳನ್ನು ಎದುರಿಸಿಕೊಂಡು ಮುಂದೆ ಬಂದಿದೆ. ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟಮಾಡಬೇಕಿದೆ. ನೊಂದವರು ನಿಮ್ಮೊಂದಿಗೆ ಸಹಕರಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯದ ಪ್ರಶ್ನೆಯಿಲ್ಲ ಎಂದರು.
ವಿಶ್ವವಿದ್ಯಾನಿಲಯದಲ್ಲಿ ಗ್ರಂಥಾಲಯ ಸೇರಿದಂತೆ ಹಲವು ಕಟ್ಟಡಗಳ ನಿರ್ಮಾಣ ಕಾಮಗಾರಿಯಾಗುತ್ತಿದೆ. ವಿವಿ ಮತ್ತಷ್ಟು ಅಭಿವೃದ್ಧಿಯಾಗಬೇಕು. ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾದ ನಾವು ಗೌರಯುತವಾಗಿ ಬಾಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಸಾಗಬೇಕು. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಪರಶುರಾಮ್ ಇತರರು ಉಪಸ್ಥಿತರಿದ್ದರು.
key words : am-party-changed-But-principle-Not changed-MP-V.Srinivas Prasad