ಮಿಲಿಯನ್ ಗಟ್ಟಲೇ ವ್ಯವಹಾರ ನಡೆಸುವ ‘ಅಮೇಜಾನ್ ‘, ಈಗಲೂ ಅಗ್ಗದ ‘ ಡೋರ್ ಡೆಸ್ಕ್ ‘ ಬಳಸುವುದರ ಹಿಂದಿದೆ ಒಂದು ಇಂಟರೆಸ್ಟಿಂಗ್ ವಿಷ್ಯ..!

amazon-door-desk-million-turn-over-company-inspiring-story

 

ನವೆಂಬರ್ 20, 2021: (www.justkannada.in) “ಅಮೇಜಾನ್.ಇನ್ ” ಈ ಇ-ವಾಣಿಜ್ಯ ಅಂತರ್ಜಾಲತಾಣದ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ವಿಶ್ವದ ಜನಸಂಖ್ಯೆ ೭೫೦ ಕೋಟಿ ಎನ್ನಲಾಗಿದೆ. ಬಹುಶಃ ಈ ೭೫೦ ಕೋಟಿ ಜನರಿಗೂ ಸಹ ಅಮೇಜಾನ್ ಚಿರಪರಿಚಿತ ಅಂತರ್ಜಾಲತಾಣ. ನಮ್ಮೆಲ್ಲರ ಜೀವನದಲ್ಲಿ ಒಮ್ಮೆಯಾದರೂ ಅಮೇಜಾನ್ ಮೂಲಕ ಏನಾದರೂ ಒಂದು ಪದಾರ್ಥ ತರಿಸಿಕೊಂಡಿಯೇ ಇರುತ್ತೇವೆ.

ಇಂದು ಅಮೇಜಾನ್ ಸಂಸ್ಥೆ ವಿಶ್ವದಾದ್ಯಂತ ಕಚೇರಿಗಳನ್ನು ಹೊಂದಿದ್ದು, ಈ ಎಲ್ಲಾ ಕಚೇರಿಗಳೂ ಸಹ ಸಂಸ್ಥೆಯ ಸ್ಥಾಪಕ ಜೆಫ್ ಬೆಝೋಸ್ ಅವರು ಸಂಸ್ಥೆ ಸ್ಥಾಪಿಸಿದ ಆರಂಭದಲ್ಲಿ ಅಭಿವೃದ್ಧಿಪಡಿಸಿದ ‘ಡೋರ್ ಡೆಸ್ಕ್’ಗಳ ವಿನ್ಯಾಸವನ್ನೇ ಆಧರಿಸಿವೆ.

ಈ ‘ಡೋರ್ ಡೆಸ್ಕ್’ಗಳೆಂದರೆ ಎನು ಎಂದು ಯೋಚಿಸುತ್ತಿರುವಿರಾ…? ಹಾಗಾದರೆ ಮುಂದೆ ಓದಿ.

ಅದು ೧೯೯೫ರ ಬೇಸಿಗೆಯ ಕಾಲ. ಜೆಫ್ ಬೆಝೋಸ್ ಆಗಷ್ಟೇ ಆರಂಭಿಸಿದ್ದ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಂತಹ ಬೆರಳಣಿಕೆಯಷ್ಟು ಸಂಖ್ಯೆಯ ಉದ್ಯೋಗಿಗಳಿಗೆ ಡೆಸ್ಕ್ಗಳನ್ನು ಪೂರೈಸಬೇಕಿತ್ತು. ಬೆಝೋಸ್ನ ಸ್ನೇಹಿತ ಹಾಗೂ ಉದ್ಯೋಗಿ ಸಂಖ್ಯೆ ಐದು, ನಿಕೊ ಲವ್ಜಾಯ್ ಅವರು ಹೇಳುವಂತೆ, ಅಮೇಜಾನ್ ಸ್ಥಾಪಕ ಬೆಝೋಸ್ ತಮ್ಮ ಕಚೇರಿಯ ಒಂದು ಮೂಲೆಯಲ್ಲಿ ವ್ಯರ್ಥವಾಗಿ ಬಿದ್ದಿದ್ದಂತಹ ದರ-ಪರಿಣಾಮಕಾರಿಯಾದ ಪರಿಹಾರವೊಂದನ್ನು ಗುರುತಿಸಿದರಂತೆ.

“ನಾವು ಒಮ್ಮೆ ರಸ್ತೆಯೊಂದರಲ್ಲಿ ತೆರಳುವಾಗ ಒಂದು ಪೀಠೋಪಕರಣಗಳ ಅಂಗಡಿಯ ಮುಂದೆ ಡೆಸ್ಕ್ಗಳು ಹಾಗೂ ಬಾಗಿಲುಗಳನ್ನು ಮಾರಾಟ ಮಾಡುತ್ತಿದುದ್ದನ್ನು ಕಂಡೆವು. ಅಲ್ಲಿ ಡೆಸ್ಕ್ಗಳಿಗಿಂತ ಬಾಗಿಲುಗಳು ಅಗ್ಗವಾಗಿದ್ದವು. ಆಗ ಬೆಝೋಸ್ ಬಾಗಿಲುಗಳನ್ನ ಖರೀದಿಸಿ ಅದಕ್ಕೆ ನಾಲ್ಕು ಕಾಲುಗಳನ್ನು ಅಳವಡಿಸಲು ನಿರ್ಧರಿಸಿದರು,” ಎನ್ನುತ್ತಾರೆ.

ಆ ಉಪಾಯದೊಂದಿಗೆ ಅಮೆಜಾನ್ನ ‘ಡೋರ್ ಡೆಸ್ಕ್’ ಪರಿಕಲ್ಪನೆ ಹುಟ್ಟಿಕೊಂಡಿತು. ಆಗ ಸಂಸ್ಥೆಯ ಯಾರೊಬ್ಬರಿಗೂ ಸಹ ಈ ವ್ಯರ್ಥವಾಗಿದ್ದಂತಹ, ‘ನೀವೇ ಸಿದ್ಧಪಡಿಸಬಹುದಾಗಿರುವಂತಹ ಡೆಸ್ಕ್’ ಮುಂದೊಂದು ದಿನ ಬೃಹತ್ ಅಮೇಜಾನ್ ಸಂಸ್ಥೆಯ ಪರಂಪರೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ.

ಈಗ ೨೦ ವರ್ಷಗಳ ಬಳಿಕವೂ ವಿಶ್ವದಾದ್ಯಂತ ಇರುವಂತಹ ಅಮೇಜಾನ್ ನ ಸಾವಿರಾರು ಉದ್ಯೋಗಿಗಳು ಮೂಲ ‘ಡೋರ್ ಡೆಸ್ಕ್’ಗಳ ಅಧುನಿಕ ಆವೃತ್ತಿಯ ಮೇಲೆ ಪ್ರತಿ ದಿನ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದು ವಿಶೇಷ.

“ನಮಗೆ ಆಗ ದುಬಾರಿ ದರದ ಡೆಸ್ಕ್ಗಳನ್ನು ಖರೀದಿಸುವಷ್ಟು ಶಕ್ತಿ ಇರಲಿಲ್ಲ. ಹಾಗಾಗಿ ಅಗ್ಗ ಎನ್ನುವ ಕಾರಣದಿಂದಾಗಿ ಈ ಡೋರ್ ಡೆಸ್ಕ್ಗಳನ್ನು ನಿರ್ಮಿಸಿದೆವು,” ಎನ್ನುತ್ತಾರೆ ಲವ್ಜಾಯ್.

“ಈಗಲೂ ಸಹ ನಾವು ಮಾಡುವ ಎಷ್ಟೊಂದು ವಸ್ತುಗಳು ಈ ರೀತಿಯ ನಿರುಪಯುಕ್ತ ಸಾಮಗ್ರಿಗಳಿಂದಲೇ ಉತ್ಪತ್ತಿಯಾಗಿವೆ. ಈ ನಿರುಪಯುಕ್ತ ಪರಿಹಾರ ನಮಗೆ ಉಪಯೋಗವಾಗುವವರೆಗೂ ಈ ಸಂಸ್ಕೃತಿ ಮುಂದುವರೆಯುತ್ತದೆ,” ಎನ್ನುತ್ತಾರೆ.

ಈ ಘಟನೆ ನಡೆದ ಒಂದು ವರ್ಷದ ನಂತರ ಜೋ ಕೀರ್ನೆ ಅವರು ಅಮೆಜಾನ್ಗೆ ಸೇರಿಕೊಂಡರು ಹಾಗೂ ಬಹಳ ಬೇಗನೇ ಸ್ವತಃ ಈ ಮೇಕ್ಶಿಫ್ಟ್ ಡೆಸ್ಕ್ಗಳ ನಿರ್ಮಾಣ ಹಾಗೂ ಅವುಗಳ ಮೇಲೆ ಕೆಲಸ ನಿರ್ವಹಿಸಲಾರಂಭಿಸದರು. “ಈ ಡೆಸ್ಕ್ಗಳು ಕೆಲವೊಮ್ಮೆ ಅಲುಗಾಡುತ್ತಿದ್ದವು, ಶಬ್ದ ಮಾಡುತ್ತಿದ್ದವು, ಅವುಗಳು ಅಲುಗಾಡದಂತೆ ಮಾಡಲು, ಸಮವಾಗಿ ಇರುವಂತೆ ಮಾಡಲು ಕಾಲುಗಳ ಕೆಳಗೆ ಕಾರ್ಡ್ಬೋರ್ಡ್ನ ತುಂಡುಗಳನ್ನು ಇಡಬೇಕಾಗುತಿತ್ತು,” ಎಂದರು.

ಲವ್ಜಾಯ್ ಹೇಳುವಂತೆ ಆ ಸಮಯದಲ್ಲಿ ಅಮೇಜಾನ್ ಸಂಸ್ಥೆ, ಬಹಳ ಆಪ್ಯಾಯತೆಯಿಂದ ಹೆಸರಿಸಿದ್ದಂತಹ ಬರ್ಟ್ ಹಾಗೂ ಎರ್ನಿ ಎಂಬ ಎರಡು ಕಂಪ್ಯೂಟರ್ ಸರ್ವರ್ ಗಳ ಮೇಲೆ ನಡೆಯುತಿತ್ತಂತೆ. ಈ ಸರ್ವರ್ ಗಳು ಬೆಝೋಸ್ ನಿರ್ಮಿಸಿದ್ದಂತಹ ಡೆಸ್ಕ್ಗಳ ಮೇಲೆ ಕುಳಿತಿದ್ದವಂತೆ. ಅವುಗಳನ್ನು ಲವ್ಜಾಯ್ ‘ಪ್ರೆಟ್ಟಿ ವಾಬ್ಲಿ’ (ಸಾಕಷ್ಟು ಅಲುಗಾಡುವ) ಎಂದು ವರ್ಣಿಸುತ್ತಿದ್ದರಂತೆ.

“ನಾನು ಬೆಝೋಸ್ ನಿರ್ಮಿಸಿದ್ದಂತಹ ಡೆಸ್ಕ್ಗಳ ಮೇಲಿದ್ದಂತಹ ಹಾರ್ಡ್ವೇರ್ ಅನ್ನು ಬದಲಿಸಿದೆ. ಆದರೆ ನೀವು ಜೆಫ್ ಬೆಝೋಸ್ ಅನ್ನ ಓರ್ವ ಕಾರ್ಪೆಟಂಟರ್ ಆಗಿ ಎಂದಿಗೂ ಕಾಣಲು ಬಯಸದಿರಬಹುದು. ಆತ ಇತರೆ ಕೆಲಸಗಳಲ್ಲಿ ನಿಷ್ಣಾತ. ಆತನೂ ಸಹ ನಿಮಗೆ ಇದನ್ನೇ ಹೇಳುತ್ತಾನೆ ಎಂದು ನನಗೆ ಅನಿಸುತ್ತದೆ,” ಎನ್ನುತ್ತಾರೆ ಲವ್ಜಾಯ್ ನಗುತ್ತಾ.

ಅಮೆಜಾನ್ ಸಂಸ್ಥೆ ಬೆಳೆದಂತೆ ಸಂಸ್ಥೆಯ ಮುಖ್ಯ ಮೌಲ್ಯಗಳ ಸೂಚಕವಗಿ ಈ ಡೋರ್ ಡೆಸ್ಕ್ಗಳ ಬಳಕೆಯನ್ನು ಮುಂದುವರೆಸಲು ನಿರ್ಧರಿಸಿತು. ಇಂದು ಈ ಪರಿಕಲ್ಪನೆಯ ‘ಡೆಸ್ಕ್’ ಅಮೆಜಾನ್ ವತಿಯಿಂದ ಉದ್ಯೋಗಿಗಳಿಗೆ ನೀಡುವ ಒಂದು ‘ಮೇಕ್ಶಿಫ್ಟ್ ಟ್ರೋಫಿ’ಯೂ ಆಗಿ ಪರಿವರ್ತನೆಯಾಗಿದೆ. ತನ್ನ ಗ್ರಾಹಕರಿಗೆ ಬಹಳ ಕಡಿಮೆ ದರದಲ್ಲಿ ಸೇವೆಗಳನ್ನು ಒದಗಿಸುವ ಉದ್ಯೋಗಿಗಳ ಅತ್ಯುತ್ತಮ ಉಪಾಯಗಳನ್ನು ಗುರುತಿಸಿ ಅಮೆಜಾನ್ ಸಂಸ್ಥೆ ಇಂದಿಗೂ ಸಹ ‘ಡೋರ್ ಡೆಸ್ಕ್’ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ.

ಲವ್ಜಾಯ್ ಅವರ ಪ್ರಕಾರ ಇದು ನಿಮ್ಮ ಸ್ವಂತ ದಾರಿಯಲ್ಲಿ ಮುಂದುವರೆಯಲು ಪ್ರತಿಬಿಂಬಿಸುವ ಚಾತುರ್ಯ, ಸೃಜನಶೀಲತೆ ಹಾಗೂ ವಿಶಿಷ್ಟತೆ.

ಕೀರ್ನೆ ೧೯೯೦ರಲ್ಲಿ ತಾನು ನಿರ್ಮಿಸಿದ್ದಂತಹ ಎರಡು ಮೂಲ ಡೋರ್ ಡೆಸ್ಕ್ಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರAತೆ. ಆ ಪೈಕಿ ಒಂದು ಡೆಸ್ಕ್ ಅನ್ನು ಮುರಿದು, ಅದನ್ನು ತನ್ನ ಮಕ್ಕಳಿಗಾಗಿ ಚಿಕ್ಕ ಗಾತ್ರದ ಡೋರ್ ಡೆಸ್ಕ್ಗಳನ್ನಗಿ ಪರಿವರ್ತಿಸಿದ್ದಾರಂತೆ.

“ನಾನು ಈ ಸಂಪ್ರದಾಯವನ್ನು ನನ್ನ ಮಕ್ಕಳಿಗೆ ಹಸ್ತಾಂತರಿಸಿದ್ದೇನೆ. ಅವರು ಇದನ್ನು ನೆನಪಿಸಿಕೊಳ್ಳುತ್ತಾರೆ. ಅರ್ಥ ಮಾಡಿಕೊಳ್ಳುತ್ತಾರೆ. ಇದು ಅಮೆಜಾನ್ನ ಚರಿತ್ರೆ ಹಾಗೂ ಅಮೆಜಾನ್ನ ಸಂಸ್ಕೃತಿಯ ಒಂದು ಭಾಗ ಎಂಬುದು ಅವರಿಗೆ ಈಗ ತಿಳಿದಿದೆ,” ಎನ್ನುತ್ತಾರೆ.

ಸುದ್ದಿ ಮೂಲ: ಅಮೇಜಾನ್

key words : amazon-door-desk-million-turn-over-company-inspiring-story