ಬೆಂಗಳೂರು,ಡಿಸೆಂಬರ್,28,2022(www.justkannada.in): ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿಯನ್ನ ಬಿಜೆಪಿ ಹೊಂದಿದ್ದು ಈ ಮಧ್ಯೆ ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ.
ಈ ಬೆನ್ನಲ್ಲೆ ಇದೀಗ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕೇವಲ ಹಳೆ ಮೈಸೂರು ಭಾಗದ ಜನರಿಂದ ಬದುಕಿರುವ ಪಕ್ಷ ಅವರಿಗೇ ಇಂದು ದ್ರೋಹ ಬಗೆಯುತ್ತಿದೆ. ಜಿ. ಪಂ.ಯಿಂದ ಹಿಡಿದು ಸಂಸತ್ತಿನ ತನಕ ಹುದ್ದೆ ಹೊಂದಿರುವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಾತ್ರ ಯಾವುದೇ ಹುದ್ದೆಯಿಲ್ಲ! ಅಭಿವೃದ್ಧಿಯ ಹೆಸರಿನಲ್ಲಿ JDS ಹಳೆ ಮೈಸೂರು ಭಾಗದಲ್ಲಿ ಮಾಡಿದ್ದೆಲ್ಲಾ ಜನರ ಲೂಟಿ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದೆ.
ಇಷ್ಟು ವರ್ಷಗಳ ಕಾಲ ಅಧಿಕಾರ ಕೊಟ್ಟ ಜನರಿಗೆ ತಿರುಗಿ ಕೊಟ್ಟಿದ್ದು ಮಾತ್ರ ಶೂನ್ಯ. ಹೆಚ್.ಡಿ ಕುಮಾರಸ್ವಾಮಿ ಅವರು ಸಾರ್ವಜನಿಕವಾಗಿ ಕಣ್ಣೀರು ಸುರಿಸುವುದು ಕೇವಲ ಈ ಭಾಗದ ಜನರನ್ನು ಮೂರ್ಖರನ್ನಾಗಿಸಲು ಮಾಡುವ ತಂತ್ರ. ‘ಏನಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು’ ಎನ್ನುವುದಷ್ಟೇ ಅವರ ಪಕ್ಷದ ಸಿದ್ಧಾಂತ ಎಂದು ಬಿಜೆಪಿ ಟೀಕಿಸಿದೆ.
ಹೆಸರಲ್ಲಷ್ಟೇ ಜಾತ್ಯಾತೀತತೆ ಆಗಿರುವ ಪಕ್ಷ ಮಾಡಿದ್ದೆಲ್ಲವೂ ಜಾತಿ ರಾಜಕಾರಣವೇ. ಕೇವಲ ಒಂದು ಸಮುದಾಯದವರನ್ನು ನೆಚ್ಚಿ ಬದುಕುತ್ತಿರುವ ಪಕ್ಷ ಆ ಸಮುದಾಯದ ಉದ್ದಾರವನ್ನೂ ಕಡೆಗಣಿಸಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದುಬಿಟ್ಟಿದೆ.
ಕಾರ್ಯಕರ್ತರೇ ರಾಜಕೀಯ ಪಕ್ಷಗಳ ಬೆನ್ನೆಲುಬು. ಆದರೆ, ಜೆಡಿಎಸ್ ಕಾರ್ಯಕರ್ತರನ್ನೇ ಕಡೆಗಣಿಸಿ ಕೇವಲ ತಮ್ಮ ಕುಟುಂಬದವರನ್ನೇ ಚುನಾವಣಾ ಅಭ್ಯರ್ಥಿಯನ್ನಾಗಿಸುತ್ತದೆ. ಇದಕ್ಕೆ ಸ್ವಂತ ಕಾರ್ಯಕರ್ತರನ್ನೇ ನಂಬದ ಹೆಚ್.ಡಿ.ರೇವಣ್ಣನವರ ಸಮಜಾಯಿಷಿ, ‘ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ಟೋಪಿ ಹಾಕಿ ಹೋಗ್ತಾರೆ’ ಅನ್ನೋದು! ಎಂದು ಜೆಡಿಎಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಹಾಗೆಯೇ ಕಾಂಗ್ರೆಸ್ ವಿರುದ್ಧವೂ ಟೀಕೆ ಮುಂದುವರೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಈ ಭಾಗದ ಅಭಿವೃದ್ಧಿಗಾಗಿ ಏನೂ ಮಾಡಲಿಲ್ಲ. ಸ್ವತಃ ಮುಖ್ಯಮಂತ್ರಿಯಾಗಿದ್ದ ಈ ಭಾಗದವರಾದ ಸಿದ್ದರಾಮಯ್ಯನವರು ಕೂಡ ಅಭಿವೃದ್ಧಿ ಕಡೆಗಣಿಸಿ ಒಡೆದಾಳುವ ನೀತಿ ಅನುಸರಿಸಿ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಿಳಿದುಬಿಟ್ಟರು. ಆದರೆ ಜನ ಇದಾವುದನ್ನೂ ಮರೆಯದೇ ಕಳೆದ ಚುನಾವಣೆಯಲ್ಲಿ ಪಾಠ ಕಲಿಸಿದರು.
2018ರ ಚುನಾವಣೆಯಲ್ಲಿ ಸೋಲು ಖಚಿತ ಎಂದು ಅರಿವಾದಾಗ ಮಾನ್ಯ ಸಿದ್ಧರಾಮಯ್ಯ ನವರು ತಮ್ಮನ್ನು ನಂಬಿದವರನ್ನು ಅನಾಥರನ್ನಾಗಿಸಿ ಬಾದಾಮಿಗೆ ಓಡಿಹೋದರು. ಅಲ್ಲಿಂದ ಮತ್ತೆ ಇಲ್ಲಿಗೆ ಬರುವ ಯೋಚನೆ ಮಾಡುತ್ತಿದ್ದಾರೆ. ಆದರೆ ಒಡೆಯರ್ ಅವರಿಗೆ ಅಗೌರವದ ಏಕವಚನದ ಪದ ಬಳಸಿದವರನ್ನು ಈ ಭಾಗದ ಸುಸಂಸ್ಕೃತ ಜನರು ಶಾಶ್ವತವಾಗಿ ತಿರಸ್ಕರಿಸಿದ್ದಾರೆ.
ಈಗ ಮತ್ತೆ ಸಿದ್ಧರಾಮಯ್ಯ ನವರು ಓಡಲೆಂದು ನಮ್ಮ ಸರ್ಕಾರ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದೆ. ಆದರೆ ಈಗ ಬನ್ನೂರು-ಮಳವಳ್ಳಿ ಮಾರ್ಗದಲ್ಲಿ ಓಡಲು ಕನಕಪುರದಲ್ಲಿ ಬಂಡೆ ಅಡ್ಡಲಾಗಿದೆ! ಸಿಎಂ ಆಗಿದ್ದಾಗ ನಿದ್ದೆ ಮಾಡಿ, ಈಗ ಚುನಾವಣೆಯೆಂದು ತಟ್ಟನೆ ಎಚ್ಚರಗೊಂಡು ಈ ಭಾಗದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ಹಳೆ ಮೈಸೂರು ಭಾಗದ ಜನರಿಗೆ ಬೇಕಿರೋದು ಅಭಿವೃದ್ಧಿಯ ರಾಜಕಾರಣ. ಈ ಭಾಗದ ಜನರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಷಾಢಭೂತಿತನವನ್ನು ಕಂಡು ಬದಲಾವಣೆಗೆ ತೆರೆದುಕೊಂಡಿದ್ದಾರೆ. ಇದೆಲ್ಲದಕ್ಕೂ ಮಂಡ್ಯದಲ್ಲಿ ನಡೆಯುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ಕಾರ್ಯಕ್ರಮವೇ ಮುನ್ನುಡಿಯಾಗಲಿದೆ ಎಂದಿದೆ.
Key words: Amit Shah-Mandya -tour –tomorrow-BJP – Congress-JDS