ಮೈಸೂರು,ಏಪ್ರಿಲ್,25,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರಕ್ಕಾಗಿ ಬಿಜೆಪಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರನ್ನ ಹಾಗೂ ಕಾಂಗ್ರೆಸ್ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನ ಕರೆಸಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಬಿಜೆಪಿಗಿಂತ ನಮ್ಮ ಜೆಡಿಎಸ್ ಸ್ಥಾನ ದೊಡ್ಡದಿರುತ್ತದೆ. ಅಮಿತ್ ಶಾ, ಪ್ರಿಯಾಂಕಾ ಆಟ ರಾಜ್ಯದಲ್ಲಿ ನಡೆಯುವುದಿಲ್ಲ. ಕನ್ನಡ ನಾಡಿಗೆ ಅವರ ಕೊಡುಗೆ ಏನು ಇಲ್ಲ. ಅಮಿತ್ ಶಾಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ರ್ಯಾಲಿಗೆ ಹೆಚ್ಚಿನ ಜನರು ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ಧಾರೆ. ಜೆಡಿಎಸ್ ಯಾರೊಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ನ ಸ್ವತಂತ್ರ ಸರ್ಕಾರ ಬರುವುದು ನಿಶ್ಚಿತ. ಹೊಸದಾಗಿ ಪಕ್ಷಕ್ಕೆ ಬಂದಿರುವವರ ಪೈಕಿಯೇ 20 ಮಂದಿ ಗೆಲ್ಲಲಿದ್ದಾರೆ. ಜೆಡಿಎಸ್ ಇಟ್ಟಿರುವ ನಿಗದಿತ ಗುರಿ ತಲುಪಿ ಯಾರ ಹಂಗು ಇಲ್ಲದೇ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಆರೋಗ್ಯ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಜ್ವರದಿಂದ ಚೇತರಿಸಿಕೊಂಡಿದ್ದೇನೆ. ವಿಶ್ರಾಂತಿ ಇಲ್ಲದೇ ಜ್ವರ,ಮೈ- ಕೈ ನೋವು ಇತ್ತು. ಈಗ ಚೇತರಿಸಿಕೊಂಡು ಮತ್ತೆ ಪ್ರಚಾರಕ್ಕೆ ಬಂದಿದ್ದೇನೆ. ಈಗಾಗಲೇ ನಾನು ಕನ್ನಡಿಗರ ಹೃದಯ ಮುಟ್ಟಿದ್ದೇನೆ. ಮುಂದಿನ 10 ದಿನಗಳಲ್ಲಿ ಪ್ರಚಾರ ಕಾರ್ಯದಲ್ಲಿ ಇರುತ್ತೇನೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎಚ್ ಡಿಕೆ ಖಡಕ್ ಎಚ್ಚರಿಕೆ.
ಕುಮಾರಸ್ವಾಮಿ ನನ್ನನ್ನು ಬೆಂಬಲಿಸಿದ್ದಾರೆ ಎಂಬ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಹೇಳಿಕೆಗೆ ತಿರುಗೇಟು ನೀಡಿದ ಎಚ್ ಡಿ ಕುಮಾರಸ್ವಾಮಿ, ನನ್ನ ಹೆಸರು ದುರ್ಬಳಕೆ ಮಾಡಿಕೊಳ್ಳುವುದನ್ನು ಅವರು ನಿಲ್ಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡಗೆ ನಾನ್ಯಾಕೆ ಬೆಂಬಲ ನೀಡಲಿ ? ಒಕ್ಕಲಿಗರು ಸಿದ್ದೇಗೌಡ ಮಾತಿಗೆ ಕಿವಿಗೊಡಬೇಡಿ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಜಿ.ಟಿ.ದೇವೇಗೌಡ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಲಿಂಗಾಯತ ಸಿಎಂ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ. ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳು ನಾಯಕರನ್ನು ಆಯ್ಕೆ ಮಾಡುತ್ತವೆ. ಆದರೆ ನಾಡಿನ ಹಿತದೃಷ್ಟಿ ಇಟ್ಟುಕೊಂಡು ಸಿಎಂ ಕೆಲಸ ಮಾಡಬೇಕು. ಆ ಸಮುದಾಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಯೂ ಸರಿಯಲ್ಲ. ಅವರು ಒಬ್ಬ ಅನುಭವಿ ರಾಜಕಾರಣಿ.ಅಂಥವರ ಬಾಯಲ್ಲಿ ಆ ಮಾತು ಯಾಕೆ ಬಂತು ಅಂತ ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಭ್ರಷ್ಟಾಚಾರ ವಿಚಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದರು.
Key words: Amit Shah- Priyanka – state-JDS- independent -government -Former CM- HD Kumaraswamy.