ಮೈಸೂರು,ಡಿಸೆಂಬರ್,18,2020(www.justkannada.in):
“ಸರ್ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಹಾಗೆಯೇ ಎಲ್ಲವೂ ನಡೆದಿದೆಯೇ?”
ಹೀಗಂತ ಹೊಸದಾಗಿ ನಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವ ಯುವಕ ಕೇಳಿದಾಗ ಸ್ವಲ್ಪ ಯೋಚಿಸಿ ಉತ್ತರಿಸಿದೆ:
“ಹಾಗೇನೂ ಇಲ್ಲ. ನಾನು ಜೀವನದಲ್ಲಿ ಬಯಸಿದ್ದೆಲ್ಲವೂ ಬಯಸಿದಂತೆಯೇ ನಡೆಯಲಿಲ್ಲ. ಆದರೆ ಏನು ನಡೆಯಿತೋ ಅದನ್ನು ಒಪ್ಪಿಕೊಳ್ಳುತ್ತಾ ಬಂದೆ. ಹಾಗಾಗಿ ನಾನು ಸುಖೀ. ನಿಜಕ್ಕೂ ಜೀವನ ವೆನ್ನುವುದು ಹೊಂದಾಣಿಕೆಯೇ”- ಅಂತ.
“ನಾನು ಈಗಾಗಲೇ ನೀವು ಹೇಳಿದ ಹಾಗೆ ಹೊಂದಾಣಿಕೆಯನ್ನು ಪ್ರಾರಂಭ ಮಾಡಿಕೊಳ್ಳುವ ಹಾಗಾಗಿ ಬಿಟ್ಟಿದೆ ಸರ್. ಇನ್ನು ನಿಮ್ಮಷ್ಟು ವಯಸ್ಸಾಗುವಾಗ ನನ್ನ ಕಥೆ ಏನಾಗುತ್ತೋ”- ಅಂತ ಆತ ಆತಂಕದಿಂದಲೇ ಹತಾಶನಾಗಿ ಹೇಳಿದಾಗ ಸಮಾಧಾನ ಪಡಿಸುತ್ತಾ ನಾನೆಂದೆ:
“ನೋಡಿ, ನೀವು ಅಂದುಕೊಂಡಂತೆ ಆಗಬಾರದುದು ಏನೂ ಆಗುವುದಿಲ್ಲ. ಆಗುವುದು ಆಗುತ್ತಲೇ ಹೋಗುತ್ತದೆ. ಅದನ್ನು ತಡೆಯುವುದಕ್ಕೆ ಸಾಧ್ಯವೇ ಇಲ್ಲ. ಅದಕ್ಕೇ ನೀವು ಹೊಂದಿಕೊಳ್ಳುತ್ತಾ ಹೋಗಬೇಕು. ಬೇರೆ ದಾರಿಯೇ ಇಲ್ಲ. ನೀವು ಬೇಕೆಂದಲ್ಲಿಗೆ ಕುದುರೆ ಬಾರದಿದ್ದಾಗ ಅದು ಹೋಗುವಲ್ಲಿಗೆ ತಾನೆ ನೀವು ಹೋಗಬೇಕು? ಇದು ಜೀವನದ ಯಶಸ್ಸಿನ ಸೂತ್ರ.”
ನನ್ನ ಮಾತು ಆತನ ಮನಸ್ಸಿಗೆ ನಾಟಿತು. ಈ ವಿಚಾರವಾಗಿ ಇನ್ನೂ ಒಂದಿಷ್ಟು ಹೇಳಬಹುದು: ನೋಡಿ ಈಗ ನಿಮ್ಮ ಮನೆಯಲ್ಲಿ ಗಂಜಿ ಲಭ್ಯವಿದೆ. ಆದರೆ ನೀವು ಕೇಸರಿಬಾತ್ ಬಯಸುತ್ತೀರಿ. “ಕೇಸರಿ ಬಾತ್ ಸಿಗುತ್ತಿಲ್ಲ ವಲ್ಲಾ”- ಎಂಬ ಕೊರಗಿನ ಕೂರಂಬನ್ನು ತಲೆಯಲ್ಲಿ ನಾಟಿಸಿಕೊಂಡಿದ್ದರೆ ಗಂಜಿಯ ರುಚಿಯಿಂದಲೂ ನೀವು ವಂಚಿತರಾಗಬೇಕಾಗುತ್ತದೆ. ನೀವು “ಕೇಸರಿಬಾತು ಸಿಗದಿದ್ದರೆ ಹಾಳು ಬಿದ್ದು ಹೋಗಲಿ. ಅದಕ್ಕಾಗಿ ಇನ್ನಾವತ್ತಾದರೂ ಪ್ರಯತ್ನಿಸಿದರಾಯಿತು. ಸದ್ಯ ದೇವರು ಜೀವ ಹಿಡಿದುಕೊಳ್ಳಲು ಗಂಜಿ ಯನ್ನಾದರೂ ದಯಪಾಲಿಸಿದ್ದಾನಲ್ಲ. ಅದರ ರುಚಿಯೂ ಕಡಿಮೆಯದೇನಲ್ಲ”- ಅಂತಂದುಕೊಂಡು ಗಂಜಿಯನ್ನು ಪ್ರೀತಿಯಿಂದ ಸವಿಯಿರಿ. ಆಗ ಕೇಸರಿಬಾತ್ ಸವಿ ಯಲ್ಲದಿದ್ದರೂ ಗಂಜಿಯ ಸವಿಯಾದರೂ ನಿಮ್ಮ ಪಾಲಿಗೆ ದೊರೆತಂತಾಗುತ್ತದೆ.
ಈ ನಿಟ್ಟಿನಲ್ಲಿ ಇನ್ನೂ ಒಂದು ಪ್ರಯೋಗವನ್ನು ನಾನು ಮಾಡುತ್ತಿದ್ದೇನೆ. ಅದರಲ್ಲಿ ಯಶಸ್ವಿಯೂ ಆಗುತ್ತೇನೆಂಬ ನಂಬಿಕೆ ನನ್ನದು:
ಬೇಸಿಗೆಯ ಉರಿ ಬಿಸಿಲು. ತಡೆಯಲಾರದ ಸೆಕೆ. ತಂಪಾದ ಗಾಳಿಯಿಲ್ಲ. ಮಳೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಬಂದರೂ ಸಾಕಷ್ಟು ಬರುತ್ತದೆಂಬ ಭರವಸೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೂರು ಹೊತ್ತೂ ಫ್ಯಾನ್ ಹಾಕಿಕೊಂಡೇ ಕುಳಿತಿರ ಬೇಕೆನಿಸುತ್ತದೆ ಅಲ್ಲವೇ?
ಹಾಕಿ, ಸ್ವಲ್ಪ ತಡೆಯಿರಿ! ಇಲ್ಲಿ ಕೇಳಿ, ಮಳೆ ಬಾರದೆ ಹೋದರೆ ನಿಮಗೆ ವಿದ್ಯುತ್ ಅಭಾವ ಖಂಡಿತ. ನಿಮ್ಮ ಫ್ಯಾನು ತಿರುಗಲು ವಿದ್ಯುತ್ ಬೇಕು. ಆದಕಾರಣ ನೀವು ಫ್ಯಾನಿಗೆ ಹೊಂದುಕೊಂಡು ಬಿಟ್ಟಿರೋ ಕೆಟ್ಟಿರಿ. ನಿಮ್ಮ ಮನೆಯಲ್ಲಿ ಸಾಕಷ್ಟು ಫ್ಯಾನುಗಳು ಇದ್ದರೂ ಅವುಗಳನ್ನು ತಿರುಗಿಸಲು ವಿದ್ಯುತ್ ಇರುವುದಿಲ್ಲ! ಆಗ ನಿಮಗೆ ಕಷ್ಟ ತಪ್ಪಿದ್ದಲ್ಲ. ಕಷ್ಟ ಯಾಕೆಂದರೆ ನೀವು ಫ್ಯಾನಿನ ಗಾಳಿಗೆ ಹೊಂದಿಕೊಂಡಿದ್ದಕ್ಕೆ!
” ಹಾಗಾದರೆ ಮಾಡುವುದೇನು?”
ಹೀಗೆ ಮಾಡಿ: ಫ್ಯಾನಿನ ಗಾಳಿಗೆ ಹೊಂದಿಕೊಳ್ಳುವ ಬದಲು ಫ್ಯಾನ್ ಆರಿಸಿ ಸೆಕೆಗೇ ಹೊಂದಿಕೊಳ್ಳುತ್ತಾ ಹೋಗಿ. “ಅಂತಹ ಸೆಕೆ ಏನೂ ಇಲ್ಲ. ತಡೆದುಕೊಳ್ಳಬಹುದು. ಅಂತ ಮನಸ್ಸಿಗೆ ನಾಟಿಸಿಕೊಳ್ಳಿ.
ನೀವು ಹೀಗೆ ಸೆಕೆಗೆ ಹೊಂದಿಕೊಂಡಾಗ ಸೆಖೆಯು ನಿಮಗೇನೂ ಮಾಡುವುದಿಲ್ಲ. ನಾನು ಇದೇ ವಿಧಾನವನ್ನು ಅನುಸರಿಸುತ್ತಿದ್ದೇನೆ. ಕಚೇರಿಯಲ್ಲಿ ನನ್ನ ತಲೆಯ ಮೇಲ್ಗಡೆ ಫ್ಯಾನ್ ಇದೆ. ಆದರೆ ಅದನ್ನೂ ನಾನು ತಿರುಗಿಸುವುದಿಲ್ಲ. ಮನೆಯಲ್ಲಿ ನನ್ನ ಮಲಗುವ ಕೊಠಡಿಯಲ್ಲಿ ಇರುವ ಫ್ಯಾನನ್ನೂ ನಾನು ತಿರುಗಿಸದೆ ಮಲಗುತ್ತೇನೆ. ಚೆನ್ನಾಗಿ ನಿದ್ದೆಯನ್ನೂ ಮಾಡುತ್ತೇನೆ.
ಈ ಕ್ರಮದಿಂದ ನಿಮಗೆ ಸೆಖೆಗೆ ಹೊಂದಿಕೊಂಡ ದ್ದೊಂದು ಲಾಭ ಹಾಗೂ ವಿದ್ಯುತ್ ಉಳಿತಾಯ ಮಾಡಿದ್ದು ಇನ್ನೊಂದು ಲಾಭ – ಹೀಗೆ ದ್ವಿಮುಖ ಲಾಭಗಳಿವೆ.
ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಅಭ್ಯಾಸ ಮಾಡುವವನಿಗೆ ಯಾವ ತೊಂದರೆಯೂ ಬಾಧಿಸದು.
ನಾನು ಏನನ್ನು ಬೇಡಿದೆನೋ ಅದನ್ನು ದೇವರು ದಯಪಾಲಿಸದಿದ್ದಾಗ ನನಗೆ ನಿರಾಸೆಯುಂಟಾದುದು ದಿಟ. ಆದರೆ ದೇವರು ಏನೆಲ್ಲ ದಯಪಾಲಿಸಿದನೋ ಅವುಗಳಿಂದ ನನ್ನ ಜೀವನವು ಸುಖಮಯವಾದುದೂ ದಿಟ!
– ಜಿ. ವಿ. ಗಣೇಶಯ್ಯ