ಅಮೃತ ಸಿಂಚನ – 19
ಉಡುಗೊರೆ ಧನ ರೂಪದಲ್ಲಿರಲಿ
ಮೈಸೂರು,ಜನವರಿ,9,2021(www.justkannada.in): ನೀವು ಮದುವೆಗೋ, ಗೃಹಪ್ರವೇಶಕ್ಕೋ, ಉಪನಯನಕ್ಕೋ ಹೋಗುತ್ತೀರಿ. ಹೋಗುವಾಗ ಕೈಯಲ್ಲೊಂದು ಉಡುಗೊರೆಯ ವಸ್ತುವನ್ನು ಒಯ್ಯುತ್ತೀರಿ. ನೀವು ಹೀಗೆ ಒಯ್ಯುವ ಉಡುಗೊರೆ ಏನಾಗಿರಬಹುದು? ಸ್ಟೀಲು ತಟ್ಟೆ, ಲೋಟಗಳು, ಶೋಕೇಸ್ ನಲ್ಲಿ (ಜಾಗ ಇದ್ದರೆ) ಇಡಬಹುದಾದ ಅಲಂಕಾರಿಕ ವಸ್ತುಗಳು – ಹೀಗೆ ಏನಾದರೂ ಆಗಿರಬಹುದು.
ಆದರೆ ಒಂದು ವಿಷಯ ನೆನಪಿಡಿ: ನೀವು ಕೊಟ್ಟಂತಹ ವಸ್ತುವೇ ಅವರ ಮನೆಯಲ್ಲೂ ಇರುವ ಸಾಧ್ಯತೆ ಇಲ್ಲದಿಲ್ಲ! ನಿಮ್ಮಂತೆ ಬೇರೆಯವರೂ ಅದೇ ರೀತಿಯ ವಸ್ತುವನ್ನು ಕೊಡಲೂಬಹುದು. ಆಗ ನೀವು ಕೊಟ್ಟ ವಸ್ತುವನ್ನು ಅವರೇನು ಮಾಡಬೇಕು?
ಹೀಗೆ ಉಡುಗೊರೆಯಾಗಿ ಬಂದ ಅನಗತ್ಯ, ನಿರುಪಯುಕ್ತ ವಸ್ತುಗಳ ಒಂದು ದೊಡ್ಡ ಮೂಟೆಯೇ ನನ್ನ ನೆಂಟರೊಬ್ಬರ ಮನೆಯ ಅಟ್ಟದಲ್ಲಿ ಬಿದ್ದಿತ್ತು!
ನನ್ನ ಮದುವೆಯ ಸಂದರ್ಭದಲ್ಲಿ ನನ್ನ ಸ್ನೇಹಿತರೊಬ್ಬರು ಕನ್ನಡ-ಕನ್ನಡ ನಿಘಂಟೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಂತಹುದೇ ನಿಘಂಟನ್ನು ನಾನು ಈ ಮೊದಲೇ ಕೊಂಡಿದ್ದೆನೆಂಬುದು ಪಾಪ ಅವರಿಗೆ ಗೊತ್ತಿರಲಿಲ್ಲ!
ಹೀಗಾದಾಗ ಏನಾಗುತ್ತದೆ? “ಕೊಟ್ಟವನಿಗೆ ಹಣ ಉಳಿಯಲಿಲ್ಲ, ಪಡೆದವನಿಗೆ ಉಪಯೋಗವಾಗಲಿಲ್ಲ” ಎಂಬಂತಾಗುತ್ತದೆ. ಆದಕಾರಣ, ನೀವು ಯಾವುದೇ ಸಂದರ್ಭದಲ್ಲಿ ಉಡುಗೊರೆ ಕೊಡುವುದಿದ್ದರೆ ಹಣದ ರೂಪದಲ್ಲೇ ಕೊಡಿರಿ. ತೆಗೆದುಕೊಂಡವನಿಗೆ ಉಪಕಾರವೂ ಆಗುತ್ತದೆ, ಉಪಯೋಗವೂ ಆಗುತ್ತದೆ. ನಿಮಗೂ ವಸ್ತುವಿನ ಆಯ್ಕೆಯ ಗೊಂದಲವು ತಪ್ಪಿ ಮನಸ್ಸಿನ ನೆಮ್ಮದಿ ಉಳಿಯುತ್ತದೆ.
– ಜಿ. ವಿ. ಗಣೇಶಯ್ಯ.
Amrita sinchana – 19 – gift form