ಅಮೃತ ಸಿಂಚನ – 20: ಸ್ನೇಹಾಚಾರ

ಅಮೃತ ಸಿಂಚನ – 20

ಸ್ನೇಹಾಚಾರ

ಮೈಸೂರು,ಜನವರಿ13,2021(www.justkannada.in): ರಾಮಣ್ಣ ಭೀಮಣ್ಣ ಗೆಳೆಯರು. ಒಂದು ಸಾರಿ ರಾಮಣ್ಣ ಭೀಮಣ್ಣನ ಹತ್ತಿರ, “500 ರೂಪಾಯಿ ಇದ್ದರೆ ಕೊಟ್ಟಿರೋ ಭೀಮಣ್ಣ, ಬಹಳ ಅರ್ಜೆಂಟ್ ಇದೆ. ಸಂಬಳವಾದಮೇಲೆ ವಾಪಾಸು ಕೊಡುತ್ತೇನೆ.” ಅಂತ ಕೇಳಿದ.jk-logo-justkannada-mysore

ಅದಕ್ಕೆ ಭೀಮಣ್ಣ, “ಏನು ಮಾಡಲಿ ರಾಮಣ್ಣ, ಜೇಬಿನಲ್ಲಿ ಐವತ್ತು ರೂಪಾಯಿ ಮಾತ್ರ ಇದೆ. ಅದು ನನ್ನ ಕರ್ಚಿಗೇ ಸಾಲುವುದಿಲ್ಲ. ಇನ್ನು 500 ನಾನು ಎಲ್ಲಿಂದ ತರಲಿ?” ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡ. “ಆ ಐವತ್ತನ್ನೇ ಕೊಟ್ಟಿರು” ಅಂತ ರಾಮಣ್ಣ ಕೇಳಿದ್ದಕ್ಕೆ, “ಇರೋ 50 ಕೊಟ್ಟು ನಾನು ಜೇಬು ಖಾಲಿ ಮಾಡಿಕೊಳ್ಳೋಕಾಗುವುದಲ್ಲ” ಅಂತ ಭೀಮಣ್ಣ ಕೈಯಾಡಿಸಿದ.

ಆಗ ರಾಮಣ್ಣ ತುಂಟನಗೆ ಬೀರುತ್ತಾ, “ನಿನ್ನನ್ನು ಪರೀಕ್ಷೆ ಮಾಡೋಕೆ ಅಂತ ಕೇಳಿದೆ ಅಷ್ಟೇ. ಆದರೆ ನೀನು ಹಣ ಕೊಡಲಿಲ್ಲ. ಆದ್ದರಿಂದ ನೀನು ಸ್ನೇಹಾಚಾರಕ್ಕೆ ಯೋಗ್ಯನಲ್ಲ ಅಂತ ನನಗೆ ಅರ್ಥವಾಯಿತು ಬಿಡು. ನೋಡಿಲ್ಲಿ, ನನ್ನ ಹತ್ತಿರ 500 ರೂಪಾಯಿ ಇದೆ” – ಅಂತ ತನ್ನ ಜೇಬಿನಿಂದ ಐನೂರರ ನೋಟು ತೆಗೆದು ತೋರಿಸಿದ!Amrita Sinchana - 20: Friendship.

ಭೀಮಣ್ಣ ಇದರಿಂದ ವಿಚಲಿತನಾಗಲಿಲ್ಲ. “ನಾನೂ ಅಷ್ಟೇ, ನಿನ್ನನ್ನು ಪರೀಕ್ಷೆ ಮಾಡೋಣ ಅಂತಾನೆ ಹಣ ಕೊಡಲಿಲ್ಲ. ಹಣ ಕೊಟ್ಟರೆ ಮಾತ್ರ ನನ್ನನ್ನು ನೀನು ಒಳ್ಳೆಯ ಸ್ನೇಹಿತ ಅಂತೀಯ. ಕೊಡದಿದ್ದರೆ ಸ್ನೇಹಕ್ಕೆ ನಾನು ಯೋಗ್ಯನಲ್ಲ ಅಂತ ತೀರ್ಮಾನಿಸುತ್ತೀಯ. ಅಂದರೆ ನಿನ್ನ ಸ್ನೇಹಾಚಾರ ಏನಿದ್ದರೂ ಹಣದ ಮೇಲೆಯೇ ನಿಂತಿದೆ ಅಂತ ನನಗೀಗ ಅರ್ಥವಾಯಿತು. ನೀನು ನಿಜವಾದ ಸ್ನೇಹಿತನೇ ಆಗಿದ್ದಿದ್ದರೆ, ನನ್ನ ಹತ್ತಿರ ನಿನಗೆ ಕೊಡಲು ನಿಜಕ್ಕೂ ಹಣವಿಲ್ಲ ಅಂತ ಭಾವಿಸುತ್ತಿದ್ದೆ. ನೋಡಿಲ್ಲಿ, ನನ್ನ ಹತ್ತಿರವೂ 500 ರೂಪಾಯಿ ಇದೆ”- ಅಂತಂದು ಜೇಬಿನಿಂದ ಐನೂರರ ನೋಟು ಹೊರತೆಗೆದು ರಾಮಣ್ಣನಿಗೆ ತೋರಿಸಿದ! ರಾಮಣ್ಣ ಬೆಪ್ಪಾದ.

ಯಾವತ್ತೂ ಸ್ನೇಹಾಚಾರ ಎನ್ನುವುದು ಹಣದ ವ್ಯವಹಾರವನ್ನು ಅವಲಂಬಿಸಬಾರದು. ಆದರೆ ಏನು ಮಾಡುವುದು? ಸುರ್ವೇ ಗುಣಾಃ ಕಾಂಚನಮಾಶ್ರಯಂತಿ ಆಗಿರುತ್ತದಲ್ಲ!

– ಜಿ. ವಿ. ಗಣೇಶಯ್ಯ.

Amrita Sinchana – 20: Friendship.