ಅಮೃತ ಸಿಂಚನ – 23
ಹಾಗಾದರೆ ಎಲ್ಲವೂ ಕನಸೇ?
ಮೈಸೂರು,ಜನವರಿ,16,2021(www.justkannada.in): ಈಗ ನೋಡಿ, ಚೆನ್ನಾಗಿ ತಿಂದು ನೀವು ಮಲಗುತ್ತೀರಿ. ಒಳ್ಳೆಯ ನಿದ್ರೆಯೂ ಬರುತ್ತದೆ. ಆಗ ನಿಮಗೆ ಕನಸು ಬೀಳತೊಡಗುತ್ತದೆ.
ಕನಸಿನಲ್ಲಿ ನಿಮಗೆ ಏನೆಲ್ಲ ಕಾಣುತ್ತಿರುತ್ತದೋ ಅವನ್ನೆಲ್ಲ ಸುಳ್ಳು ಅಂತ ದೇವರಾಣೆಗೂ ನೀವು ಭಾವಿಸುವುದಿಲ್ಲ ಅಲ್ಲವೇ? ಅವೆಲ್ಲ ಕೇವಲ ಕನಸು, ಸುಳ್ಳು, ನಿಜವಾಗಿ ನಡೆದುದಲ್ಲ ಎನ್ನುವುದರ ಅರಿವು ನಿಮಗಾಗಬೇಕಾದರೆ ನಿಮಗೆ ಎಚ್ಚರ ವಾಗಬೇಕು. ಅಂದರೆ ನೀವು ಎಚ್ಚರಗೊಳ್ಳುವ ವರೆಗೂ ಏನೆಲ್ಲ ಕಾಣುತ್ತಿರುತ್ತೀರೋ ಅವೆಲ್ಲ ಸತ್ಯವೇ ಅಂತ ಭ್ರಮಿಸಿರುತ್ತೀರಿ! ಅಂದರೆ, ಕನಸಿನಲ್ಲಿ ನಾವು ಕಾಣುತ್ತಿರುವುದೆಲ್ಲ ಸತ್ಯ ಅಂತಲೇ ತಿಳಿದಿರುತ್ತೇವಲ್ಲವೇ?
ಈಗ, ನಾನು ಮತ್ತು ನೀವು ಒಂದು ಊರಿನಲ್ಲಿ ಒಮ್ಮೆ ಭೇಟಿಯಾಗುತ್ತೇವೆ ಅಂತಿಟ್ಟುಕೊಳ್ಳೋಣ. ಕೆಲವು ಕ್ಷಣ ನಾವಿಬ್ಬರೂ ಮಾತುಕತೆ ನಡೆಸುತ್ತೇವೆ. ಇದು ಸತ್ಯ ಘಟನೆ ಅಂತ ನಾನು – ನೀವು ಇಬ್ಬರೂ ತಿಳಿದುಕೊಂಡಿರುತ್ತೇವೆ. ಆದಕಾರಣ ಇದು ಕನಸೇ ಯಾಕಾಗಿರಬಾರದು! ಏಕೆಂದರೆ, ಕನಸನ್ನು ನಾವು ಸತ್ಯ ಅಂತಲೇ ತಿಳಿದಿರುತ್ತೇವೆವಲ್ಲ?
ನನ್ನ – ನಿಮ್ಮ ಭೇಟಿಯೂ ಸತ್ಯ ಅಂತಲೇ ಕಾಣುತ್ತಿರುವುದರಿಂದ ಅದನ್ನೂ ಕನಸು ಅಂತ ತೀರ್ಮಾನಿಸಿ ಕೊಂಡರೆ “ಕನಸಲ್ಲದುದು ಯಾವುದು” ಎಂಬ ಪ್ರಶ್ನೆ ಎದುರಾಗುತ್ತದೆ. ನನ್ನ – ನಿಮ್ಮ ಭೇಟಿಯು ಕನಸೇ ಆಗಿದ್ದ ಪಕ್ಷದಲ್ಲಿ “ಅದು ಕನಸು” ಎಂಬ ಸತ್ಯವನ್ನು ಅರಿಯಲು ನಮಗೆ ಎಚ್ಚರವಾಗುವುದು ಯಾವಾಗ? ನನ್ನ – ನಿಮ್ಮ ಭೇಟಿಯು “ಕನಸು” ಅಂತ ನಮಗೆ ಖಚಿತ ವಾಗುವುದು ಯಾವಾಗ?
ಇದನ್ನೇ ಆಚಾರ್ಯ ಶಂಕರರು “ಮಾಯೆ” ಎಂದಿರಬಹುದೇ?
– ಜಿ. ವಿ. ಗಣೇಶಯ್ಯ.
Amrita sinchana – 23. So is everything a dream?