ಅಮೃತ ಸಿಂಚನ – 24
ಅನಗತ್ಯವಾದವೆಲ್ಲ ಕಸ
ಮೈಸೂರು,ಜನವರಿ,19,2021(www.justkannada.in): ಮಾರುಕಟ್ಟೆಗೆ ಹೋಗುತ್ತೀರಿ. ಅಲ್ಲೆಲ್ಲಾ ಸುತ್ತಾಡುತ್ತೀರಿ. ಯಾವುದೋ ಒಂದೆರಡು ವಸ್ತುಗಳು ನಿಮ್ಮ ಕಣ್ಣುಗಳನ್ನು ಸೆಳೆಯುತ್ತವೆ. ಅವು ನಿಮಗೆ ಅಷ್ಟೊಂದು ಸುಂದರವಾಗಿ ಕಾಣುತ್ತವೆ.
ಸರಿ ಆ ವಸ್ತುಗಳನ್ನು ನೀವು ಕೊಂಡು ಮನೆಗೆ ತಂದೂ ಬಿಡುತ್ತೀರಿ. ಆಗ ನೋಡಿ ಪ್ರಾರಂಭವಾಗುತ್ತದೆ ನಿಮ್ಮ ಪಜೀತಿ, “ಇವನ್ನು ಎಲ್ಲಿ ಇಡುವುದು? ಹೇಗೆ ಇಡುವುದು?” ಎಂದು!
ಒಂದು ವಸ್ತುವು ಎಷ್ಟೇ ಚೆನ್ನಾಗಿ ಕಂಡರೂ ಮಾರುಕಟ್ಟೆಯಲ್ಲಿನ ಯಾವುದೋ ಒಂದು ಹಿನ್ನೆಲೆಯಲ್ಲಿ ಅದು ಚೆನ್ನಾಗಿ ಕಾಣಿಸುತ್ತದೆ ಅಷ್ಟೇ. ಆದರೆ, ನಿಮ್ಮ ಮನೆಯ ಸಂದರ್ಭದಲ್ಲಿ ಅದು ಚೆನ್ನಾಗಿ ಕಾಣಿಸದೆಯೂ ಇರಬಹುದು. ಅಲ್ಲದೆ ನಿಮ್ಮ ಮನೆಯಲ್ಲಿ ಅದನ್ನು ಇಡಲು ಸೂಕ್ತ ಸ್ಥಳವೂ ಇಲ್ಲದಿರಬಹುದು. ಆಗ ನೀವೇನು ಮಾಡುತ್ತೀರಿ? ಯಾವುದೋ ಒಂದು ಮೂಲೆಯಲ್ಲಿ ಅದನ್ನು ಬಿಸಾಕುತ್ತೀರಿ.
ನಮ್ಮ ಮನೆಯಲ್ಲೂ ಎಷ್ಟೋ ವೇಳೆ ಇಂತಹ ಬೇಡದ ಸುಂದರ ವಸ್ತುಗಳು ಕೈಗೆ-ಕಾಲಿಗೆ ಸಿಗುತ್ತಿರುತ್ತವೆ. ಕಸಗುಡಿಸುವಾಗ ಇವುಗಳ ಉಪಟಳ ಅಷ್ಟಿಷ್ಟಲ್ಲ.
ಅಟ್ಟದ ಮೇಲೆ ರಟ್ಟಿನ ಪೆಟ್ಟಿಗೆಗಳಲ್ಲಿ ನನ್ನ ಹೆಂಡತಿ ಜೋಪಾನವಾಗಿ ಇರಿಸಿದ್ದ ಸ್ಟೀಲ್ ಪಾತ್ರೆಗಳನ್ನು ನನ್ನ ಮಗ “ನಿರುಪಯುಕ್ತ”ವೆಂದು ಘೋಷಿಸಿ ಒಮ್ಮೆ ಮಾರಿ ಬಂದ!
ಹೌದು. ಅವುಗಳನ್ನು ನಮ್ಮ ಮನೆಯಲ್ಲಿ ಬಳಸುತ್ತಲೇ ಇರಲಿಲ್ಲ. ಅವುಗಳನ್ನು ಕೊಂಡ ನಂತರ ಒಮ್ಮೆಯೂ ಬಳಸಿದ ದಾಖಲೆ ಸಹ ಇಲ್ಲ. ಅಥವಾ, ನನ್ನ ಜೀವಮಾನದಲ್ಲೇ ಅವುಗಳನ್ನು ಉಪಯೋಗಿಸುವ ಸಂದರ್ಭ ಬರುತ್ತದೆ ಎಂದು ನನಗೆ ಅನಿಸಲೂ ಇಲ್ಲ. ಅಂದಮೇಲೆ ಇಂತಹ ವಸ್ತುಗಳು ನಮಗೆ ಏತಕ್ಕೆ ಬೇಕು?
ನಮಗೆ ಯಾವ ರೀತಿಯಲ್ಲೂ ಉಪಯೋಗಕ್ಕೇ ಬಾರದ ಚೆನ್ನಾಗಿರುವ ವಸ್ತುಗಳು ಮಾರುಕಟ್ಟೆಯಲ್ಲಿ ಎಷ್ಟೋ ಇರುತ್ತವೆ. ಆದರೆ ಅವುಗಳ ಅಗತ್ಯ ನಮಗೆ ಬರುವುದೇ ಇಲ್ಲ. ಹಾಗಾಗಿ ಅವುಗಳನ್ನು ಕೊಂಡರೆ ಅವು ಒಂದು ಕಸದ ಹಾಗೆ ಆಗಿಬಿಡುತ್ತವೆ
ಇನ್ನು ಕೆಲವರು ಕೆಲವು ವಸ್ತುಗಳನ್ನು ಕೊಳ್ಳುವುದುಂಟು. ಜೀವಮಾನದಲ್ಲಿ ಒಂದೋ ಎರಡೋ ಸಾರಿ ಉಪಯೋಗಕ್ಕೆ ಬರುವಂತಹವು. ಕಾಶಿಗೆ ಹೋಗಲು ಕಾರು ಕೊಂಡ ಹಾಗೆ ಅಂತಹ ವಸ್ತುಗಳು. ಕಾಶಿಗೆ ಜೀವಮಾನದಲ್ಲಿ ಒಂದೋ ಎರಡೋ ಸಾರಿ ಹೋದೆವು. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರು ಕೊಳ್ಳುವುದು ಯಾವ ಬುದ್ಧಿವಂತಿಕೆ?
ನೀವು ಯಾವುದೇ ವಸ್ತುವನ್ನು ಕೊಳ್ಳುವುದಿದ್ದರೂ ಹಲವು ಬಾರಿ ಯೋಚಿಸಿ, “ಈ ವಸ್ತುವು ನನಗೆ ಬೇಕಾ? ಇದು ಇಲ್ಲದಿದ್ದರೆ ಆಗುವುದೇ ಇಲ್ಲವೇ? ಇದು ನನಗೆ ಅಷ್ಟೊಂದು ಉಪಯುಕ್ತವೇ? ಕೊಡುವ ಬೆಲೆಗೆ ಇದು ತಕ್ಕುದಾಗಿದೆಯೇ?” ಇತ್ಯಾದಿಯಾಗಿ.
“ಆ ವಸ್ತುವು ನಿಮಗೆ ಬೇಕೇ ಬೇಕು, ಅದು ಇಲ್ಲದಿದ್ದರೆ ಆಗುವುದೇ ಇಲ್ಲ”- ಅಂತ ನಿಮಗೆ ಅನಿಸಿದರೆ ಮಾತ್ರ ಆ ವಸ್ತುವನ್ನು ಕೊಂಡುಕೊಳ್ಳಿ. ಇಲ್ಲದಿದ್ದರೆ ಬೇಡ.
ಇನ್ನು ಕೆಲವರು “ಮಗಳ ಮದುವೆಯಲ್ಲಿ ಕೊಡಲಿಕ್ಕಾಗುತ್ತದೆ” ಎಂದು ಹೆಣ್ಣುಮಗುವು ಹುಟ್ಟಿದಾಗಿನಿಂದಲೂ ವಿವಿಧ ವಸ್ತುಗಳನ್ನು ಸಂಗ್ರಹಿಸತೊಡಗುತ್ತಾರೆ. ಅವರ ಮಗಳ ಮದುವೆಯ ಹೊತ್ತಿಗೆ ಅವೆಲ್ಲ ಹಳಸಲು ತಂತ್ರಜ್ಞಾನದ ವಸ್ತುಗಳಾಗಿಬಿಟ್ಟಿರುತ್ತವೆ!20-22 ವರ್ಷಗಳಲ್ಲಿ ಒಂದು ಪ್ರೆಶರ್ ಕುಕ್ಕರ್ ಎಷ್ಟೆಲ್ಲಾ ಅಭಿವೃದ್ಧಿ ಹೊಂದಿರುತ್ತದೆ ಎಂಬುದನ್ನು ಆಲೋಚಿಸಿ ನೋಡಿ. ಇದು ಹೇಗಾಗುತ್ತದೆಂದರೆ, ಈಗಿನ ಸಿಡಿ ಪ್ಲೇಯರ್ ಬದಲಿಗೆ ಹಿಂದಿನ ಗ್ರಾಮಫೋನ್ ಉಡುಗೊರೆ ಕೊಟ್ಟಂತಾಗುತ್ತದೆ! ಆದಕಾರಣ ನೀವು ಹೀಗೆ ಮಾಡಿ: ನೀವು ಸಂಗ್ರಹಿಸಲಿರುವ ವಸ್ತುಗಳಿಗೆ ತಗಲುವ ಹಣವನ್ನು ಬ್ಯಾಂಕಿನಲ್ಲಿ ಇಡುತ್ತಾ ಹೋಗಿ. ಮದುವೆಯ ಸಂದರ್ಭದಲ್ಲಿ ಆಗ ಸಿಗುವ ವಸ್ತುಗಳನ್ನು ಕೊಳ್ಳಿರಿ.
– ಜಿ. ವಿ. ಗಣೇಶಯ್ಯ.