ಅಮೃತ ಸಿಂಚನ – 29 : ಉಪಕಾರ ಸ್ಮರಣೆ !

ಅಮೃತ ಸಿಂಚನ – 29 : ಉಪಕಾರ ಸ್ಮರಣೆ!

ಮೈಸೂರು,ಜನವರಿ,28,2021(www.justkannada.in): ಶಿಷ್ಯರುಗಳಲ್ಲಿ ಒಬ್ಬ ಗುರುಗಳನ್ನು ಕಾಣಲು ಆಶ್ರಮಕ್ಕೆ ಬಂದ. ಅವನ ಮುಖ ಬಾಡಿದಂತಿತ್ತು. ಮನಸ್ಸು ಖಿನ್ನವಾಗಿತ್ತು.jk

“ವಿಚಾರವೇನು?” – ಗುರುಗಳು ಪ್ರಶ್ನಿಸಿದರು.

“ಸ್ವಾಮಿ, ಮನಸ್ಸಿಗೆ ಬಹಳ ಬೇಸರವಾಗಿದೆ – ಈ ಜನಗಳ ರೀತಿನೀತಿಗಳನ್ನು ಕಂಡು….” ಶಿಷ್ಯ ಪ್ರಾರಂಭಿಸಿದ.

“ಏನಪ್ಪಾ ಜನರಲ್ಲಿ ತಪ್ಪಾಗಿರುವುದನ್ನು ಕಂಡೆ?” ಕುತೂಹಲದಿಂದ ಗುರುಗಳು ಪ್ರಶ್ನಿಸಿದರು.

“ಯಾರಿಗೂ ಉಪಕಾರ ಸ್ಮರಣೆಯೇ ಇರುವುದಿಲ್ಲ ಗುರುಗಳೇ. ಸಹಾಯ-ಸಹಕಾರ ಬೇಕಾದಾಗ ನೀನೇ ಚಂದ್ರ, ನೀನೇ ಇಂದ್ರ ಅಂತ ಹೇಳಿಕೊಂಡು ನನ್ನ ಹತ್ತಿರ ಬರ್ತಾರೆ. ಕೆಲಸವಾದ ನಂತರ ಅವರು ನನ್ನತ್ತ ಕಣ್ಣೆತ್ತಿಯೂ ನೋಡೋದಿಲ್ಲ.”- ಶಿಷ್ಯನ ತಕರಾರು ಇದು.

ಸ್ವಲ್ಪ ಹೊತ್ತು ಸುಮ್ಮನಿದ್ದ ಗುರುಗಳು ನಿಧಾನವಾಗಿ ಹೇಳತೊಡಗಿದರು: “ನೀನು ಮಾಡಿದ ಉಪಕಾರವನ್ನು ಮಾಡಿಸಿಕೊಂಡವರು ಸ್ಮರಿಸುವುದಿಲ್ಲ ಅಂತ ನೀನೇಕೆ ಬೇಸರ ಪಟ್ಟುಕೊಳ್ಳಬೇಕು? ಉಪಕಾರ ಸ್ಮರಣೆ ಮಾಡದಿದ್ದರೆ ಅದು ಅವನ ತಪ್ಪು, ನಿನ್ನದಲ್ಲ. ನಿನ್ನದಲ್ಲದ ತಪ್ಪಿಗೆ ನೀನೇಕೆ ಬೇಸರಪಟ್ಟುಕೊಳ್ಳಬೇಕು? ಅಷ್ಟಕ್ಕೂ ನೀನು ಮಾಡುವ ಉಪಕಾರವನ್ನು ಮಾಡಿಸಿಕೊಂಡವನು ಸ್ಮರಿಸಲೇಬೇಕು ಅನ್ನುವ ನಿರೀಕ್ಷೆ ನಿನಗೇಕೆ? ಅವನು ನಿನ್ನ ಉಪಕಾರವನ್ನು ಸ್ಮರಿಸಲಿ ಬಿಡಲಿ, ಅದು ಎಲ್ಲಿ ದಾಖಲಾಗಬೇಕೋ ಅಲ್ಲಿ ದಾಖಲಾಗಿಯೇ ಆಗಿರುತ್ತದೆ. ಈ ವ್ಯವಸ್ಥೆಗೆ ಅಮೆರಿಕೆಯ ಎಡ್ಗಾರ್ ಕೇಶಿ ಎಂಬ ಅತಿಂದ್ರಿಯ ಜ್ಞಾನಿ “ಆಕಾಶಿಕ್ ರೆಕಾರ್ಡ್” (ಅಂದರೆ ಆಕಾಶ ದಾಖಲೆ) ಎಂದಿದ್ದಾನೆ. ನಮ್ಮವರು ಅದಕ್ಕೆ ಚಿತ್ರಗುಪ್ತನ ದಾಖಲೆ ಎನ್ನುತ್ತಾರೆ. ನೀನು ಮಾಡುವ ಪ್ರತಿಯೊಂದು ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಜನ್ಮಾಂತರಗಳಲ್ಲಿ ಪ್ರತಿಫಲ ಇದ್ದೇ ಇರುತ್ತದೆ. ಅದಕ್ಕೆ ಯಾರದೋ ಸ್ಮರಣೆಯ, ವಶೀಯ ಅಗತ್ಯ ಬರುವುದಿಲ್ಲ….”

ಗುರುಗಳು ಮುಂದುವರಿದು ಹೇಳತೊಡಗಿದರು:

“ಈಗ ನೋಡು, ನೀನೊಂದು ಸ್ಕೂಟರಿನಲ್ಲಿ ಹೋಗುತ್ತಿದ್ದಿ ಅಂತಿಟ್ಟುಕೋ. ಯಾರೋ ಕೈಲಾಗದ ವೃದ್ಧರು ನಿನ್ನ ಹತ್ತಿರ ಡ್ರಾಪ್ ಕೇಳುತ್ತಾರೆ. ನೀನು ಡ್ರಾಪ್ ಕೊಡುತ್ತಿ. ಆಗವರು, ‘ತುಂಬಾ ಉಪಕಾರವಾಯಿತಪ್ಪಾ, ನಿನಗೆ ಒಳ್ಳೆಯದಾಗಲಿ’ ಅಂತ ಹರಸುತ್ತಾರೆ. ನಿನಗೊಂದು ಥ್ಯಾಂಕ್ಸ್ ಹೇಳುತ್ತಾರೆ.

ಆದರೆ ವಾಸ್ತವವಾಗಿ ವೃದ್ಧರಿಗೆ ಉಪಕಾರ ಮಾಡುವ ಅವಕಾಶ ನಿನಗೆ ದೊರೆತುದು ನಿನ್ನ ಸೌಭಾಗ್ಯ ಅಂತ ತಿಳಿ. ಉಪಕರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಿದರೂ ಎಷ್ಟೋ ಜನ ಅದನ್ನು ಬಳಸಿಕೊಳ್ಳುವುದಿಲ್ಲ. ಇನ್ನು ಕೆಲವರಿಗೆ ಉಪಕರಿಸಲು ಅವಕಾಶ ದೊರೆತು, ಉಪಕರಿಸುವ ಮನಸ್ಸಿದ್ದರೂ ಅವರಿಗೆ ಸಾಮರ್ಥ್ಯವಿರುವುದಿಲ್ಲ! ಅಂದಹಾಗೆ, ನೀನು ಉಚಿತವಾಗೇನೂ ಉಪಕರಿಸುವುದಿಲ್ಲ. ನೀನು ಬೇಡವೆಂದರೂ ಪುಣ್ಯದ ಲಾಭವಂತೂ ನಿನ್ನ ಖಾತೆಗೆ ಜಮಾ ಅಂತೂ ಆಗಿರುತ್ತದೆ! ”
ಗುರುಗಳ ಮಾತುಗಳನ್ನು ಕೇಳಿ ಶಿಷ್ಯ ನಿರಮ್ಮಳನಾದ. “ಗುರುಗಳೇ, ನನ್ನ ಕಣ್ಣು ತೆರೆಸಿದಿರಿ. ಉಪಕಾರ ಮಾಡಿದ್ದಲ್ಲಿ ಮರುಕ್ಷಣವೇ ಮರೆತುಬಿಡುವುದು ಯೋಗ್ಯ ಅಂತ ನನಗೆ ಈಗ ಅನ್ನಿಸಿದೆ. ಉಪಕಾರ ಮಾಡುವುದು ನನ್ನ ಕೆಲಸವೇ ಹೊರತು ಅದರ ಲೆಕ್ಕಾಚಾರವನ್ನು ಇಡುವುದಲ್ಲ – ಎನ್ನುವ ತೀರ್ಮಾನಕ್ಕೆ ನಾನು ಬಂದಿದ್ದೇನೆ” ಅಂತ ಶಿಷ್ಯ ಹೇಳಿಕೊಂಡ.

ಶಿಷ್ಯನಲ್ಲಾದ ಮನ: ಪರಿವರ್ತನೆಯನ್ನು ಕಂಡು ಗುರುಗಳಿಗೂ ಸಮಾಧಾನವಾಯಿತು.

– ಜಿ. ವಿ. ಗಣೇಶಯ್ಯ.

Amrita  sinchana- 29.
Management Memory.