ಮೈಸೂರು,ಡಿಸೆಂಬರ್,21,2020(www.justkannada.in):
ಅಮೃತ ಸಿಂಚನ – 4
ಪ್ರಿ ಪೇಯ್ಡ್ – ಪೋಸ್ಟ್ ಪೇಯ್ಡ್
ನಿಮ್ಮ ಹತ್ತಿರ ಮೊಬೈಲ್ ಫೋನ್ ಇದೆಯಲ್ಲವೇ? ಅದರಲ್ಲಿ ಪ್ರಿ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಂಬ ಎರಡು ರೀತಿಯ ಸೇವೆ (?) ಗಳಿವೆಯಲ್ಲವೇ?
ಹಾಗೆಂದರೇನು?
“ಪ್ರಿ ಪೇಯ್ಡ್” ಎಂದರೆ, ನೀವು ಮೊದಲೇ ಹಣ ಕೊಟ್ಟಿರುತ್ತೀರಿ, ನಂತರ ಕೊಟ್ಟಷ್ಟು ಹಣಕ್ಕೆ ಎಷ್ಟಾಗುತ್ತದೋ ಅಷ್ಟು ಮಾತನಾಡುತ್ತೀರಿ ಮಾತನಾಡುತ್ತೀರಿ.
ಇನ್ನು “ಪೋಸ್ಟ್ ಪೇಯ್ಡ್” ಅಂದರೆ, ನೀವು ಮೊದಲು ಮಾತನಾಡುತ್ತೀರಿ. ಆಮೇಲೆ ಆ ಮಾತುಗಳಿಗೆ ಆಗುವಷ್ಟು ಹಣವನ್ನು ತೆರುತ್ತೀರಿ.
ಜೀವನದಲ್ಲಿಯೂ ಹೀಗೆಯೇ ಎರಡು ರೀತಿಯ ವ್ಯವಸ್ಥೆ ಇದೆ ಎಂಬುದನ್ನು ನೀವು ಬಲ್ಲಿರಾ? ಅವು ಯಾವುವೆಂದರೆ, ಪ್ರೀಪೇಯ್ಡ್ ಜೀವನ ಹಾಗೂ ಪೋಸ್ಟ್ ಪೇಯ್ಡ್ ಜೀವನ!
ಈಗ ಪ್ರಿಪೇಯ್ಡ್ ವ್ಯವಸ್ಥೆಯ ಜೀವನದ ವಿಚಾರವನ್ನು ನೋಡಿ: ಇಲ್ಲಿ ನೀವು ಹಿಂದಿನ ಜನ್ಮದಲ್ಲಿ ಗಳಿಸಿದ ಪುಣ್ಯಕ್ಕೆ ಅಥವಾ ಕರ್ಮಕ್ಕೆ ಎಷ್ಟು ಸುಖವೋ ಅಥವಾ ದು:ಖವೋ ಅಷ್ಟನ್ನು ಈ ಜನ್ಮದಲ್ಲಿ ಅನುಭವಿಸುತ್ತೀರಿ, ಮೊಬೈಲ್ ಫೋನ್ ನ ಪ್ರಿ ಪೇಯ್ಡ್ ವ್ಯವಸ್ಥೆಯಲ್ಲಿ ಮೊದಲೇ ಹಣ ಕಟ್ಟಿ ನಂತರ ಅದಕ್ಕೆ ಆಗುವಷ್ಟು ಹೊತ್ತು ಮಾತನಾಡುತ್ತೀರಲ್ಲಾ, ಹಾಗೆ!
ಇನ್ನು ಪೋಸ್ಟ ಪೇಯ್ಡ್ ಜೀವನ ವ್ಯವಸ್ಥೆಯನ್ನು ಗಮನಿಸೋಣ: ಇಲ್ಲಿ ನೀವು ಕರ್ಮಗಳನ್ನು ಮಾಡುತ್ತಾ ಹೋಗುತ್ತೀರಿ, ಮೊಬೈಲ್ ಫೋನ್ ನ ಪೋಸ್ಟ ಪೇಯ್ಡ್ ವ್ಯವಸ್ಥೆಯಲ್ಲಿ ಮೊದಲೇ ಮಾತನಾಡಿ ನಂತರ ಬಂದ ಬಿಲ್ ಹಣವನ್ನು ಕಟ್ಟುತ್ತೀರಲ್ಲ ಹಾಗೆ. ನಂತರ ಮುಂದಿನ ಜನ್ಮದಲ್ಲಿ ನಿಮಗೆ ಈ ಕರ್ಮಗಳ ಬಿಲ್ ಬರುತ್ತದೆ, ಅದನ್ನು ಕಟ್ಟುತ್ತಾ ಹೋಗುತ್ತೀರಿ!
ಇಲ್ಲಿ ಒಂದು- ಹಿಂದಿನ ಜನ್ಮದಲ್ಲಿ ಗಳಿಸಿದ ಪುಣ್ಯ ಅಥವಾ ಪಾಪದ ಫಲವನ್ನು ಈ ಜನ್ಮದಲ್ಲಿ ಅನುಭವಿಸುವುದು. ಇನ್ನೊಂದು- ಮುಂದಿನ ಜನ್ಮಕ್ಕಾಗಿ ಪುಣ್ಯ ಅಥವಾ ಪಾಪದ ಫಲಗಳನ್ನು ಗಂಟು ಕಟ್ಟುವುದು.