ಅಮೃತ ಸಿಂಚನ – 47: ಹೇಳಬೇಡಿ, ಮಾಡಿ
ಮೈಸೂರು,ಜೂನ್,28,2021(www.justkannada.in):
ಇಪ್ಪತ್ತು ಸಾರಿ ಹೇಳಿದರೂ ಒಬ್ಬರು ಒಂದು ಕೆಲಸವನ್ನು ಮಾಡುವುದಿಲ್ಲ. ಹಠ ಬಿಡದ ತ್ರಿವಿಕ್ರಮನಂತೆ ನೀವು ಇನ್ನೂ ಹಲವು ಸಾರಿ ಕೆಲಸ ಮಾಡವಂತೆ ಆ ವ್ಯಕ್ತಿಗೆ ಹೇಳುತ್ತೀರಿ. ಇದರಿಂದ ನಿಮ್ಮ ಕಂಠ ಶೋಷಣೆ ಆಗುತ್ತದೆಯೇ ಹೊರತು ಕೆಲಸವಂತೂ ಆಗುವುದಿಲ್ಲ.
ಇದರಿಂದ ನಿಮಗೆ ವಿಪರೀತ ಬೇಸರ ವಾಗುವುದರ ಜೊತೆಗೆ ಆ ವ್ಯಕ್ತಿಯ ಮೇಲೆ ಕೋಪವೂ ಬರುತ್ತದೆ. ಆಗ ನೀವು ಏನು ಮಾಡುತ್ತೀರಿ?
ಏನಾದರೂ ಮಾಡಿಕೊಳ್ಳಿ. ಅದಕ್ಕೂ ಮೊದಲು ಇಲ್ಲಿ ಒಂದು ಕಿವಿಮಾತಿದೆ ಕೇಳಿಬಿಡಿ:
“ನೂರು ಸಾರಿ ಹೇಳುವುದಕ್ಕಿಂತ ಒಂದು ಸಾರಿ ಮಾಡುವುದು ಮೇಲು” ಗೊತ್ತಾಯಿತೆ?
“ಅದೇನೋ ಸರಿ, ಆದರೆ, ಆ ಒಂದು ಸಾರಿ ಮಾಡುವುದು ಎಂದರೆ ಯಾರು ಮಾಡಬೇಕು?”
“ಹೇಳುವವರೇ, ಅಂದರೆ ನೀವೇ ಮಾಡಬೇಕು!”
ಮಾತನಾಡದೆ ಕೆಲಸ ಮಾಡುವುದನ್ನು ಕಲಿಯಬೇಕು. ಬೇರೆಯವರು ಮಾಡಲಿ ಅಂತ ಕಾಯಬಾರದು. “ಬೇರೆಯವರು ಒಂದು ಕೆಲಸವನ್ನು ಮಾಡಲಿಲ್ಲ”- ಅಂತ ದೂರುವ ಬದಲಿಗೆ, “ನಾನೇ ಆ ಕೆಲಸವನ್ನು ಮಾಡಲಿಲ್ಲ”- ಅಂತಂದುಕೊಂಡು ಮುಂದುವರಿದು ಕೆಲಸವನ್ನು ಮಾಡಿ ಮುಗಿಸಬೇಕು. ಆಗ ಉಂಟಾಗುವ ಪರಿವರ್ತನೆಯನ್ನು ಗಮನಿಸಿರಿ.
ಯಾವ ಕಾರಣಕ್ಕೂ ಬೇರೆಯವರ ತಲೆಯ ಮೇಲೆ ಗೂಬೆ ಕೂರಿಸಲು ಹೋಗಲೇ ಬೇಡಿ. ಬದಲಿಗೆ ಆ ಗೂಬೆಯು ನಿಮ್ಮ ತಲೆಯ ಮೇಲೆಯೇ ಕುಳಿತಿರಲಿ. ಇದರಿಂದ ಹಾನಿಯೇನೂ ಆಗುವುದಿಲ್ಲ.
– ಜಿ. ವಿ. ಗಣೇಶಯ್ಯ.