ಅಮೃತ ಸಿಂಚನ – 49: ಪಾಪ ಮಾಡದಿರುವುದರ ಕಷ್ಟ

ಮೈಸೂರು,ಜುಲೈ,14,2021(www.justkannada.in):

ಅಮೃತ ಸಿಂಚನ – 49:

ಪಾಪ ಮಾಡದಿರುವುದರ ಕಷ್ಟjk

ಪುಣ್ಯ ಮಾಡುವುದು ಹಾಗಿರಲಿ, ಪಾಪ ಮಾಡದ ಹಾಗೆ ಜಾಗೃತೆ ವಹಿಸುವುದೂ ಸಹ ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು.

ಇನ್ನೇನೂ ಬೇಡ. ಪ್ರಾಣಿ ಹಿಂಸೆ, ಅವುಗಳ ಹತ್ಯೆ ಪಾಪವಷ್ಟೇ? ಆದ್ದರಿಂದ ಇರುವೆಗಳನ್ನು ಇನ್ನು ಮುಂದೆ ಕೊಲ್ಲುವುದಿಲ್ಲ ಎಂಬ ನಿಯಮವನ್ನು ಅನುಷ್ಠಾನಕ್ಕೆ ತರಲು ಯತ್ನಿಸಿ ನೋಡಿ. ಆಗ ನೀವು ರಸ್ತೆಯ ಮೇಲೆ ಸರಾಗವಾಗಿ ನಡೆದಾಡುವುದೇ ಕಷ್ಟವಾಗಿಬಿಡುತ್ತದೆ. ಏಕೆಂದರೆ, ನೀವು ದಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮುಂದೆ ಸಾಗಬೇಕಾಗುತ್ತದೆ. ಇರುವೆಗಳು ಇಲ್ಲದ ಜಾಗವನ್ನೇ ನೋಡಿ ನೀವು ಪಾದ ಊರಬೇಕಾಗುತ್ತದೆ. ವೇಗವಾಗಿ ಓಡುವಾಗ, ವಾಹನಗಳ ಮೂಲಕ ಸಂಚರಿಸುವಾಗ ಅಸಂಖ್ಯಾತ ಇರುವೆಗಳ ಸಾವಿಗೆ ನೀವು ಕಾರಣರಾಗಬೇಕಾಗಿ ಬಂದು, ಅಷ್ಟರಮಟ್ಟಿಗೆ ನೀವು ಪಾಪ ಕಟ್ಟಿಕೊಳ್ಳಬೇಕಾಗುತ್ತದೆ.

ಇರುವೆಯೊಂದು ದಾರಿಯಲ್ಲಿ ಎಲ್ಲಿಗೋ ಹೋಗುತ್ತಿರುತ್ತದೆ. ಪಾಪ, ಅದು ತನ್ನ ತಾಯಿಯನ್ನೋ, ಮಗುವನ್ನೋ ಇನ್ನಾವ ಬಂಧುವನ್ನೋ ಹುಡುಕಿಕೊಂಡು ಹೋಗುತ್ತಿರಬಹುದು. ಅಥವಾ ಆಹಾರವನ್ನೇ ಹುಡುಕಿಕೊಂಡು ಹೋಗುತ್ತಿರಬಹುದು. ಅಂತಹ ಸಂದರ್ಭದಲ್ಲಿ ನೀವು ಆ ಇರುವೆನ್ನು ಕೊಂದರೆ ಪುಣ್ಯ ಉಂಟೇ?

ಈ ಇರುವೆಗಳ ವ್ಯವಹಾರದಲ್ಲಿ ನಿಮಗೆ ಇನ್ನೂ ಒಂದು ಲಾಭವಿದೆ:

ದಾರಿಯಲ್ಲಿ ನಡೆಯುತ್ತಿರುವಾಗ ಇರುವೆಗಳನ್ನು ಕೊಲ್ಲದೆ ಮುಂದೆ ಸಾಗುವುದರ ಕಡೆಗೇ ನಿಮ್ಮ ಗಮನವೆಲ್ಲ ಇರುತ್ತದೆ. ಅಂದರೆ, ನಿಮ್ಮ ದೃಷ್ಟಿ, ಗಮನಗಳು ನಿಮ್ಮ ಪಾದಗಳ ಹತ್ತಿರದಲ್ಲೇ ಇರುತ್ತವೆ. ಅಂದರೆ, ನಿಮ್ಮ ಅಕ್ಕ-ಪಕ್ಕ ಹಿಂದೆ -ಮುಂದೆ ಓಡಾಡುವ ಸುಂದರ ಯುವತಿಯರ, ಸ್ತ್ರೀಯರ ಕಡೆ ನಿಮ್ಮ ದೃಷ್ಟಿ ಗಮನ ಹರಿದು ಚಿತ್ತಚಾಂಚಲ್ಯ ವಾಗುವುದು, ದುಷ್ಟ ಯೋಚನೆಗಳು ಮನದಲ್ಲಿ ಮೂಡುವುದು ತಪ್ಪುತ್ತದೆ. ಅಂದರೆ, ಇಲ್ಲಿ ಎರಡು ರೀತಿಯಲ್ಲಿ ನಿಮಗೆ ಲಾಭ: ಒಂದು, ಇರುವೆಗಳನ್ನು ಕೊಂದು ಪಾಪ ಕಟ್ಟಿಕೊಳ್ಳದೆ ಇರುವುದು, ಇನ್ನೊಂದು, ಯುವತಿಯರನ್ನು ನೋಡಿ ಮನಸ್ಸಿನಲ್ಲಿ ದುಷ್ಟ ಯೋಚನೆ ಮಾಡದಿರುವುದು!

ಇರುವೆಗಳನ್ನು ಕೊಲ್ಲದಿದ್ದರೆ ನಿಮಗೆ ಪುಣ್ಯವೇನೂ ಬರುವುದಿಲ್ಲ. ಆದರೆ ಪಾಪ ಬರುವುದು ತಪ್ಪುತ್ತದೆ. ಜೊತೆಗೆ ಇದರಿಂದಾಗಿ ಮನಸ್ಸಿಗೆ ಸಿಗುವ ನೆಮ್ಮದಿಗೆ ಹೋಲಿಸಿದರೆ ಪಾಪ ಮಾಡದೇ ಇರಲು ನೀವು ಪಡುವ ಕಷ್ಟ ಏನೂ ಅಲ್ಲ!

-ಜಿ. ವಿ. ಗಣೇಶಯ್ಯ.