ಮೈಸೂರು,ಆಗಸ್ಟ್,10,2021(www.justkannada.in)
ಹಿರಿಯರಿಗೆ, ಗುರುಗಳಿಗೆ ಯಾರಾದರೂ ಕಿರಿಯರು ನಮಸ್ಕರಿಸಿದಾಗ, “ಇಷ್ಟಾರ್ಥ ಸಿದ್ದಿರಸ್ತು”- ಎಂದು ಹರಸುವ ಒಳ್ಳೆಯ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ.
ತಮ್ಮ ಹಾರೈಕೆ ಸಿದ್ಧಿಸುತ್ತದೆ ಎಂದು ಅಂದುಕೊಂಡ ಮಹನೀಯರು ಇಂದಿನ ಕಾಲದಲ್ಲಿ “ಇಷ್ಟಾರ್ಥ ಸಿದ್ಧಿರಸ್ತು”- ಅಂತ ಹರಿಸುವಾಗ ಒಂದಿಷ್ಟು ಜಾಗರೂಕರಾಗಿರಬೇಕು ಅನಿಸುತ್ತದೆ.
ಇಷ್ಟಾರ್ಥ ಸಿದ್ಧಿರಸ್ತು (ಇಷ್ಟಾರ್ಥಗಳು ಈಡೇರಲಿ) ಅಂತ ಹರಸಿದಾಗ, ಹಾರೈಕೆಗೆ ಒಳಗಾದ ವ್ಯಕ್ತಿಯು ಸಜ್ಜನನಾಗಿದ್ದರೆ ಚಿಂತೆಯಿಲ್ಲ. ಆದರೆ, ಅಕಸ್ಮಾತ್ ಅವನೇನಾದರೂ ದುರ್ಜನನಾಗಿದ್ದರೆ? ಅವನ ಇಷ್ಟಾರ್ಥಗಳೂ ಕೆಟ್ಟ ವಾಗಿರುವ ಸಂಭವವೇ ಹೆಚ್ಚಲ್ಲವೇ?
ಕಾಡುಗಳ್ಳ ವೀರಪ್ಪನ್ ಅಂಥವರು ನಮಸ್ಕರಿಸಿ ಬೇಡಿದಲ್ಲಿ, ಅಂಥವರಿಗೆ “ಇಷ್ಟಾರ್ಥ ಸಿದ್ಧಿರಸ್ತು”- ಅಂತ ಹರಸಿದಲ್ಲಿ ಏನಾಗಬಹುದು? ಅಂಥವನ ಇಷ್ಟಾರ್ಥಗಳು “ಹೆಚ್ಚು ಹೆಚ್ಚು ಆನೆಗಳನ್ನು ನಾನು ವಧಿಸುವಂತಾಗಿ, ಹೆಚ್ಚು ಹೆಚ್ಚು ದಂತಗಳು ನನಗೆ ಲಭ್ಯವಾಗಲಿ”-ಎಂಬಂತಹ ದುಷ್ಟ ಬಯಕೆಗಳು ಅವನ ಮನದಲ್ಲಿ ಇರಲಾರವೇ?
“ಹಾಗಾದರೆ ಹಾರೈಸುವುದು, ಹರಸುವುದು ಹೇಗೆ?”- ಎಂಬ ಪ್ರಶ್ನೆ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ “ಸದಿಷ್ಟಾರ್ಥ ಸಿದ್ಧಿರಸ್ತು” ಅಂದರೆ “ನಿಮ್ಮ ಒಳ್ಳೆಯ ಇಷ್ಟಾರ್ಥಗಳು ನೆರವೇರಲಿ”- ಎಂದು ಹರಸುವುದು ಸುರಕ್ಷಿತ ಹಾಗೂ ಅಪೇಕ್ಷಣೀಯ ಅಂತ ಅನಿಸುತ್ತದಲ್ಲವೇ?
ಒಟ್ಟಿನಲ್ಲಿ, ನಮ್ಮದು ಒಳ್ಳೆಯ ಬಯಕೆಗಳಾಗಿರಬೇಕು. ನಮ್ಮ ಬಯಕೆಗಳು ಈಡೇರುವುದರಿಂದ ಪ್ರಕೃತಿಗಾಗಲೀ, ಯಾವುದೇ ಜೀವಿಗಾಗಲೀ ಯಾವುದೇ ರೀತಿಯ ತೊಂದರೆ ಆಗಬಾರದು ಅಷ್ಟೇ.
– ಜಿ. ವಿ. ಗಣೇಶಯ್ಯ.