ಅಮೃತ ಸಿಂಚನ – 7:
ಇದು ಬುದ್ಧಿ ಕಲಿಸುವ ವಿಧಾನವೇ?
ಮೈಸೂರು,ಡಿಸೆಂಬರ್,24,2020(www.justkannada.in): ಚನ್ನಪಟ್ಟಣದ ಸಮೀಪದ ಹಳ್ಳಿಯಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಕೊಂದ ಹೃದಯವಿದ್ರಾವಕ ವರದಿಯೊಂದು ಒಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಗಳ ನಡತೆ ಸರಿಯಿಲ್ಲ. ಅವಳು ತುಂಬಾ ಒರಟು. ಇದ್ದಕ್ಕಿದ್ದಂತೆ ಎಲ್ಲೋ ಹೋಗಿಬಿಡುತ್ತಿದ್ದಳು. ಒಂದೆರಡು ದಿನಗಳಲ್ಲಿ ಹಿಂದಿರುಗುತ್ತಿದ್ದಳು. ಒಂದು ದಿನ ತಾಯಿಗೇ ಹಿಡಿದುಕೊಂಡು ಹೊಡೆದಳು – ಇತ್ಯಾದಿ ಆರೋಪಗಳು ಹುಡುಗಿಯ ಮೇಲೆ.
ಈ ಹುಡುಗಿಗೆ ತಂದೆ-ತಾಯಿಗಳು ಸಾಕಷ್ಟು ಬುದ್ಧಿ ಹೇಳಿ ಸೋತರು. “ಇದು ನಮ್ಮ ಮಾನ ಮರ್ಯಾದೆಯ ಪ್ರಶ್ನೆ. ನಾವು ಕೂಲಿನಾಲಿ ಮಾಡಿಕೊಂಡು ಬದುಕುವ ಜನ. ಹಣವಿಲ್ಲದ ನಮಗೆ ಮರ್ಯಾದೆಯೇ ಹಣ” ಅಂತೆಲ್ಲ ಬುದ್ಧಿ ಹೇಳಿದರೂ ಪ್ರಯೋಜನಕ್ಕೆ ಬರಲಿಲ್ಲ. ಹುಡುಗಿ ತನ್ನ ಚಾಳಿ ಬಿಡಲಿಲ್ಲ. ತಂದೆ-ತಾಯಿಯರಿಗೆ ರೋಸಿ ಹೋಯಿತು.
ಅದೊಂದು ದಿನ ಯಾರೊಡನೆಯೋ ಎಲ್ಲಿಗೋ ಹೋಗಿದ್ದ ಈ ಹುಡುಗಿ ಮನೆಗೆ ಹಿಂದಿರುಗಿದಾಗ ದೊಡ್ಡ ರಾದ್ಧಾಂತವೇ ನಡೆಯಿತು
ತಂದೆ ಹುಡುಗಿಗೆ ನಾಲ್ಕು ಬಾರಿಸಿದ. ಹುಡುಗಿ ನೆಲಕ್ಕೆ ಬಿದ್ದಳು. ಕೋಪಗೊಂಡ ತಂದೆ ಅವಳ ಕುತ್ತಿಗೆಗೆ ಜೋರಾಗಿ ಒದ್ದ. ಅಷ್ಟೇ. ಹುಡುಗಿ ನಿರ್ಜೀವವಾದಳು. ಗಂಡ ಹೆಂಡತಿ ಸೇರಿ ಹುಡುಗಿಯ ಶವವನ್ನು ನಿರ್ಜನ ಪ್ರದೇಶವೊಂದಕ್ಕೆ ಒಯ್ದು ಸೀಮೆಎಣ್ಣೆ ಸುರಿದು ಸುಟ್ಟರು.
ನಂತರ ಈ ತಂದೆ-ತಾಯಿಯರು ಜೈಲು ಪಾಲಾದರು, ಅದು ಬೇರೆ ಮಾತು.
ಆಲೋಚಿಸಿ ನೋಡಿ, ಮಕ್ಕಳು ಎಂತಹವರಾದರೂ ತಂದೆ-ತಾಯಿಯರಿಗೆ ಅವರು ಸಾಯಲಿ ಅನ್ನಿಸುತ್ತದೋ? ಅವರನ್ನು ತಂದೆ-ತಾಯಿಯರು ಕೊಲ್ಲುತ್ತಾರೋ? ಖಂಡಿತ ಇಲ್ಲ ಅಲ್ಲವೇ? ಹಾಗಿದ್ದರೆ ಈ ತಂದೆ ತನ್ನ ಮಗಳನ್ನು ಏಕೆ ಕೊಂದ?
ವಾಸ್ತವವಾಗಿ ಎಷ್ಟೋ ಕೊಲೆಗಳು ನಡೆಯುವುದು ಹೇಗೆ ಗೊತ್ತೇ?
“ನಾಲ್ಕು ಬಾರಿಸಿ ಬುದ್ಧಿ ಕಲಿಸುತ್ತೇನೆ”- ಅಂತ ತಂದೆಯೊಬ್ಬ ಮಗನಿಗೆ ಹೊಡೆಯುತ್ತಾನೆ. ಹೊಡೆತದ ತೀವ್ರತೆ ಸ್ವಲ್ಪ ಹೆಚ್ಚಾಗಿ ಮಗನ ಪ್ರಾಣ ಹೋಗಿಬಿಡುತ್ತದೆ. ಈಗ ಬುದ್ಧಿ ಕಲಿಯುವ ಸರದಿ ತಂದೆಯದಾಗುತ್ತದೆ! ವಾಸ್ತವವಾಗಿ ಮಗನನ್ನು ಕೊಲ್ಲುವ ಬಯಕೆ ತಂದೆಗೆ ಖಂಡಿತ ಇರುವುದಿಲ್ಲ!
ಹೀಗಾಗಿ ತಂದೆಯೊಬ್ಬ ಕೊಲೆಗಾರನ ಪಟ್ಟ ಪಡೆದು ಸಮಾಜದಲ್ಲಿ ತಲೆ ಎತ್ತದ ಸ್ಥಿತಿಯನ್ನು ತಂದುಕೊಳ್ಳುತ್ತಾನೆ. ಇದಕ್ಕೇನು ಕಾರಣ? ಇದಕ್ಕೆ ಕಾರಣ ಸ್ಪಷ್ಟವಿದೆ: ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಟ್ಟುದೇ ಆಗಿದೆ. ವಿವೇಕದ ಕೈಯಲ್ಲಿ ಬುದ್ಧಿಯನ್ನು ಕೊಟ್ಟಿದ್ದಿದ್ದರೆ ಹೀಗಾಗುತ್ತಿರಲಿಲ್ಲ. ಹೊಡೆಯದೆ, ಬಡಿಯದೆ ಮಕ್ಕಳಿಗೆ ಬುದ್ಧಿ ಕಲಿಸಲು ಸಾಧ್ಯವಿಲ್ಲವೇ? ಮಕ್ಕಳ ದುರ್ನಡತೆಯಿಂದ ಕೋಪಗೊಂಡ ತಂದೆಗೆ ಬೇರೆ ದಾರಿ ತೋರುವುದೇ ಇಲ್ಲವೇ? ಆತ ಹಿಂಸೆಗೇ ಇಳಿಯಬೇಕೇ?
ಕೋಪದ ಬಗೆಗೆ ಗೀತೆಯಲ್ಲಿ ಕೃಷ್ಣ ಹೇಳುವ ಮಾತುಗಳು ಯಾವ ಕಾಲಕ್ಕೂ ಪ್ರಸ್ತುತವೇ:
ಕ್ರೋಧಾದ್ಭವತಿ ಸಂಮೋಹ:/
ಸಂಮೋಹಾತ್ ಸ್ಮೃತಿ ವಿಭ್ರಮ:/
ಸ್ಮೃತಿ ಭ್ರಂಶಾದ್ಬುದ್ಧಿ ನಾಶೋ/
ಬುದ್ಧಿ ನಾಶಾತ್ ಪ್ರಣಶ್ಯತಿ//
ಅಂದರೆ, ಕ್ರೋಧದಿಂದ ಸಂಮೋಹವುಂಟಾಗುತ್ತದೆ. ಸಂಮೋಹದಿಂದ ಸ್ಮೃತಿಯ ಭ್ರಮೆ ಉಂಟಾಗುತ್ತದೆ. ಸ್ಮೃತಿ ಬ್ರಮೆಯಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿ ನಾಶದಿಂದ ಆ ವ್ಯಕ್ತಿಯು ನಾಶವಾಗುತ್ತಾನೆ.
ಅಂದರೆ ಕ್ರೋಧವೇ ನಾಶದ ಮೂಲ ಅಂತ ಆಗುತ್ತದಲ್ಲವೇ? ಆದಕಾರಣ ಕ್ರೋಧ ಅಥವಾ ಕೋಪದ ಸಹವಾಸದಿಂದ ಮಾನವ ದೂರವಿರಬೇಕು.