ಅಮೃತ ಸಿಂಚನ – 8
“ಉಪಕರಿಸಲು ಅವಕಾಶ ಮಾಡಿಕೊಟ್ಟಿರಲ್ಲ!”
ಮೈಸೂರು,ಡಿಸೆಂಬರ್,25,2020(www.justkannada.in): ಆ ಗೃಹಸ್ಥರು ಮೈಸೂರಿನ ಸರಸ್ವತಿಪುರಂನ ರಸ್ತೆಯೊಂದರಲ್ಲಿ ತನ್ನ ಸ್ಕೂಟರಿನ ಮೇಲೆ ಹೋಗುತ್ತಿದ್ದರು. ದೂರದಲ್ಲಿ ಒಬ್ಬ ವಯೋವೃದ್ಧರು ಕೈಯಲ್ಲಿ ಊರುಗೋಲು ಹಿಡಿದು ನಿಂತಿರುವುದು ಇವರ ಕಣ್ಣಿಗೆ ಬಿತ್ತು. ಆ ವೃದ್ಧರು ಒಂದು ದಿಕ್ಕಿಗೆ ಹೋಗುತ್ತಿದ್ದ ದ್ವಿಚಕ್ರ ವಾಹನಗಳಿಗೆಲ್ಲಾ ಕೈ ತೋರಿಸುತ್ತಿದ್ದರು. ಆದರೆ ಯಾರೂ ನಿಲ್ಲಿಸುವ ಔದಾರ್ಯ ತೋರಲಿಲ್ಲ.ಈ ಗೃಹಸ್ಥರು ಆ ವಯೋವೃದ್ಧರನ್ನು ಸಮೀಪಿಸಿದಾಗಲೂ ಆತ ಕೈ ಅಡ್ಡ ಹಿಡಿದರು. ಗೃಹಸ್ಥರು ವಾಹನವನ್ನು ನಿಲ್ಲಿಸಿ, “ಯಾವ ಕಡೆಗೆ ಹೋಗಬೇಕಾಗಿತ್ತು ಸ್ವಾಮೀ?” ಅಂತ ಕೇಳಿದರು.
“ಕಾಮಾಕ್ಷಿ ಆಸ್ಪತ್ರೆಗೆ ಹೋಗಬೇಕಾಗಿತ್ತು” ಅಂತಂದರು ಆ ವಯೋವೃದ್ಧರು.
ವಾಸ್ತವವಾಗಿ ಸ್ಕೂಟರಿನ ಗೃಸ್ಥರು ಕಾಮಾಕ್ಷಿ ಆಸ್ಪತ್ರೆಯ ವಿರುದ್ಧ ದಿಕ್ಕಿಗೆ ಹೋಗಬೇಕಾಗಿತ್ತು. ಆದರೂ “ಸ್ಕೂಟರು ಹತ್ತಿ” ಅಂತಂದು ವೃದ್ಧರನ್ನು ಕಾಮಾಕ್ಷಿ ಆಸ್ಪತ್ರೆಯ ಎದುರಿಗೆ ಕರೆದೊಯ್ದು ಇಳಿಸಿದರು.
“ತುಂಬಾ ಉಪಕಾರವಾಯಿತು ಸರ್, ಇಷ್ಟು ದೂರ ನಡೆಯೋದು ತಪ್ಪಿಸಿದರಿ” ಅಂತ ಕೃತಜ್ಞತೆಯಿಂದ ಆ ವೃದ್ಧರೆಂದಾಗ ಆ ಗೃಹಸ್ಥರು, “ಉಪಕಾರವೇನು ಬಂತು ಬಿಡಿ, ನೀವು ಹಲವರಿಗೆ ಕೈ ಅಡ್ಡ ಹಿಡಿದಿರಿ. ಆದರೆ ಅವರ್ಯಾರೂ ಸ್ಕೂಟರು ನಿಲ್ಲಿಸಿ ನಿಮ್ಮನ್ನು ಕರೆದೊಯ್ಯಲಿಲ್ಲ. ಹಾಗಾಗಿ ಆ ಭಾಗ್ಯ ನನ್ನ ಪಾಲಿಗೆ ದಕ್ಕಿತು. ಅದಕ್ಕಾಗಿ ನಾನು ನಿಮಗೆ ಕೃತಜ್ಞ.” ಎಂದಂದು ಸ್ಕೂಟರನ್ನು ಮುಂದಕ್ಕೆ ಚಲಾಯಿಸಿ ಬಿಟ್ಟರು.
ವೃದ್ಧರು “ಈ ಕಾಲದಲ್ಲಿ ಇಂಥವರೂ ಪುಣ್ಯಕ್ಕೆ ಇದ್ದಾರಲ್ಲ” ಅಂತ ಅಚ್ಚರಿ ಪಟ್ಟುಕೊಂಡು ಆಸ್ಪತ್ರೆಯೊಳಗೆ ಕಾಲಿರಿಸಿದರು
ಹೌದು, ಉಪಕಾರ ಮಾಡಿಸಿಕೊಳ್ಳುವವರು ಇಲ್ಲದೆ ಹೋದರೆ ಉಪಕರಿಸಿ ಪುಣ್ಯ ಕಟ್ಟಿಕೊಳ್ಳುವ ಜನರಿಗೆ ಉಪಕರಿಸುವ ಅವಕಾಶವೇ ಇಲ್ಲವಾಗಿಬಿಡುತ್ತದೆ. ಆದಕಾರಣ ಉಪಕರಿಸಲು ಅವಕಾಶ ಮಾಡಿಕೊಡುವ ವ್ಯಕ್ತಿಗಳಿಗೆ ನಾವು ಕೃತಜ್ಞರಾಗಿರಬೇಕಲ್ಲವೇ?
ಅಷ್ಟೇ ಅಲ್ಲ, ನಾವು ಯಾರಿಗೂ ಉಚಿತವಾಗಿ ಉಪಕಾರ ಮಾಡುವುದಿಲ್ಲ. ಅಂದರೆ, ನಾವು ಮಾಡಿದ ಉಪಕಾರಕ್ಕೆ ಹಣ ತೆಗೆದುಕೊಳ್ಳುತ್ತೇವೆ ಅಂತಲ್ಲ.ನಾವು ಮಾಡಿದ ಸಣ್ಣ ಒಂದು ಉಪಕಾರಕ್ಕೂ ಪುಣ್ಯವಂತೂ ಸಿಗುತ್ತದೆ. ಇದು ನಾವು ಮಾಡಿದ ಉಪಕಾರಕ್ಕೆ ಸಿಕ್ಕ ಪ್ರತಿಫಲ ತಾನೇ? ಈ ಪುಣ್ಯದಲ್ಲಿ ನಾವು ಪುಣ್ಯ ಗಳಿಸಲು ಕಾರಣರಾದವರಿಗೆ ಪಾಲು ಕೊಡುತ್ತೇವಾ? ಇಲ್ಲ ಅಲ್ಲವೇ?
– ಜಿ. ವಿ. ಗಣೇಶಯ್ಯ.