ಅಮೃತ ಸಿಂಚನ – 26
ಸರಿ ಯಾವುದು?
ಯಾವುದೋ ಒಂದು ಹೋಟೆಲಿಗೆ ಸಂಸಾರ ಸಮೇತ ಹೋಗುತ್ತೀರಿ. ಹಲವಾರು ತಿಂಡಿಗಳನ್ನು ತಿನ್ನುತ್ತೀರಿ. ಕಾಫಿ, ಟೀ ಕುಡಿಯುತ್ತೀರಿ. ನಂತರ ಮಾಣಿಯು ನಿಮಗೆ ಬಿಲ್ ಕೊಡುತ್ತಾನೆ. ಅದನ್ನು ಕ್ಯಾಶ್ ಕೌಂಟರಿನಲ್ಲಿ ಪಾವತಿಸುತ್ತೀರಿ. ಆ ಕ್ಷಣದಲ್ಲಿ ನಿಮಗೆ ಒಂದು ತಪ್ಪು ಗೋಚರಿಸುತ್ತದೆ: “ಮಾಣಿಯು ಒಂದು ತಿಂಡಿಯ ಹಣವನ್ನು ಬಿಲ್ಲಿನಲ್ಲಿ ಸೇರಿಸಿಲ್ಲ” ಎಂಬುದು.
ಈಗ ನಿಮ್ಮ ಕರ್ತವ್ಯವೇನು?
ನೀವು ಮಾತನಾಡದೆ ಸುಮ್ಮನೆ ಮಾಣಿಯು ಕೊಟ್ಟ ಬಿಲ್ಲಿನ ಹಣವನ್ನು ತೆತ್ತು ಮನೆಗೆ ನಡೆದರೆ, ಬಿಲ್ಲಿನಲ್ಲಿ ಸೇರಿಸಿಲ್ಲದ ತಿಂಡಿಯ ಹಣವು ಉಳಿತಾಯವಾಗಿ ನಿಮಗೆ ಲಾಭವಾಗುತ್ತದೆ.
ಆದರೆ, “ಹಾಗೆ ಮಾಡುವುದರಿಂದ ಹೋಟೆಲಿನವನಿಗೆ ಮೋಸವಾಗುತ್ತದೆ. ಅದು ತಪ್ಪು”- ಅಂತ ನಿಮ್ಮ ಅಂತರಾತ್ಮ ಎಚ್ಚರಿಸುತ್ತದೆ.
ಆಗ ನೀವೇನು ಮಾಡುತ್ತೀರಿ? ಹೋಟೆಲಿನ ವನಿಗೆ ವಿಷಯವನ್ನು ತಿಳಿಸಿ ಬಿಲ್ಲಿನಲ್ಲಿ ಸೇರಿಸಿಲ್ಲದ ತಿಂಡಿಯ ಹಣವನ್ನು ಪಾವತಿ ಮಾಡುತ್ತೀರಿ, ಹೌದೇ?
ಹಾಂ, ಸ್ವಲ್ಪ ನಿಲ್ಲಿ! ಇಲ್ಲೊಂದು ಧರ್ಮ ಸೂಕ್ಷ್ಮವಿದೆ. ನೀವು ಹೀಗೆ ಮಾಡಿದಾಗ “ನಾಲಾಯಕ್ಕು” ಅಂತ ಮಾಣಿಯ ಕೆಲಸಕ್ಕೆ ಸಂಚಕಾರ ಬಂದು ಅವನ ಜೀವನೋಪಾಯಕ್ಕೆ ತೊಂದರೆಯಾಗುವ ಸಂಭವವಿದೆ. ಆ ದೋಷಕ್ಕೆ ನೀವು ಕಾರಣರಾಗಿ ಬಿಡಬಹುದು! ಒಂದು ತಿಂಡಿಯ ಹಣವು ಹೋದರೆ ಹೋಟೆಲಿನವನೇನೂ ಮುಳುಗಿ ಹೋಗುವುದಿಲ್ಲ. ಹೋಟೆಲಿನವನಿಗಾಗುವ ನಷ್ಟವನ್ನು ತಪ್ಪಿಸುವ ಪ್ರಯತ್ನವನ್ನು ನೀವು ಮಾಡಿದರೆ, ಪಾಪ ಆ ಬಡಪಾಯಿ ಮಾಣಿ ಕೆಲಸ ಕಳೆದುಕೊಂಡು ಮುಳುಗಿ ಹೋಗುತ್ತಾನೆ!
ಯಾವ ಪಾಪವು ದೊಡ್ಡದೋ ಅದನ್ನು ಬಿಡಿರಿ. ಕಡಿಮೆ ಪಾಪದಲ್ಲಿ ಭಾಗಿಯಾಗಿ!
ಅಂದರೆ, ನೀವು ಕ್ಯಾಶ್ ಕೌಂಟರಿನಲ್ಲಿ ಬಿಲ್ಲಿನಲ್ಲಿ ಸೇರಿಸಿಲ್ಲದ ತಿಂಡಿಯ ವಿಚಾರವನ್ನು ಪ್ರಸ್ತಾಪಿಸಬೇಡಿ. ಹೀಗೆ ಮಾಡುವಾಗ ನಿಮ್ಮ ಮನಸ್ಸಿನಲ್ಲಿ “ಒಂದು ತಿಂಡಿಗೆ ಕೊಡುವ ಹಣವನ್ನು ಉಳಿಸಿ ಲಾಭ ಮಾಡಿಕೊಂಡೆ” ಎಂಬ ಭಾವ ಬರಬಾರದು. ಬದಲಿಗೆ “ಒಬ್ಬ ಹುಡುಗನಿಗೆ ಉಂಟಾಗಲಿದ್ದ ತೊಂದರೆಯನ್ನು ತಪ್ಪಿಸಲು ಹೀಗೆ ಮಾಡಬೇಕಾಯಿತು” ಅಂದುಕೊಳ್ಳಿ.
– ಜಿ. ವಿ. ಗಣೇಶಯ್ಯ.