ಮೈಸೂರು, ಅಕ್ಟೋಬರ್ 02, 2021 (www.justkannada.in): ಮಹಾತ್ಮ ಗಾಂಧೀಜಿ ಅವರ ವಿಚಾರಗಳು ಎಂದಿಗೂ ಆರದ ಜ್ಯೋತಿ. ‘ನನ್ನ ಜೀವನವೇ, ನನ್ನ ಸಂದೇಶ’, ‘ಪ್ರೀತಿಯೊಂದೇ ಮಾನವರನ್ನು ಕೂಡಿಸಬಲ್ಲದು’ ಎಂಬ ಅವರ ನುಡಿಮುತ್ತುಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಗಾಂಧಿ ಭವನ ಮತ್ತು ಮಹಾಜನ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ 153ನೇ ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಅಹಿಂಸಾ ದಿನಾಚರಣೆ ಹಾಗೂ ಗಾಂಧೀಜಿ ಕುರಿತು ಗಾಂಧಿ ಭವನ ಪ್ರಕಟಿಸಿರುವ ಏಳು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೇಳಿದಿಷ್ಟು…
ಜಗತ್ತಿನ ಮಹಾಪುರುಷರುಗಳಲ್ಲಿ ಮಹಾತ್ಮ ಗಾಂಧೀಜಿ ಅವರು ಪ್ರಮುಖರಾಗಿದ್ದಾರೆ. ಸತ್ಯಶೋಧನೆ ಒಂದು ಮಾರ್ಗವೆಂದು ತಿಳಿದಿದ್ದ, ಗಾಂಧೀಜಿ ಅವರ ದೃಷ್ಟಿಯು, ಅತ್ಯಂತ ವಿಶಾಲವಾಗಿತ್ತು. ಜಗತ್ತಿನ ಇತಿಹಾಸದಲ್ಲಿ ಅನೇಕ ಮಹಾಪುರುಷರು ಸತ್ಯ, ಅಹಿಂಸೆಯ ಮಹತ್ವವನ್ನು ತಿಳಿಸಿದ್ದಾರೆ. ಆದರೆ, ಗಾಂಧೀಜಿಯವರು ಪ್ರತಿಪಾದಿಸಿರುವ ಸತ್ಯ ಹಾಗೂ ಅಹಿಂಸೆಯ ವೌಲ್ಯಗಳು ಮಾನವನ ಜೀವನಕ್ಕೆ ಒಂದು ರೀತಿಯ ಪೂರ್ಣತೆಯನ್ನು ತಂದುಕೊಟ್ಟಿವೆ ಎಂದರು.
ಅಲ್ಲದೆ, ಸತ್ಯಶೋಧನೆ, ಅಹಿಂಸೆ, ಧರ್ಮ, ನೀತಿ, ಸದಾಚಾರ, ನಂಬಿಕೆ, ಸಹಿಷ್ಣುತೆ, ದೇಶಪ್ರೇಮ, ಹರಿಜನೋದ್ಧಾರ, ಅಸ್ಪೃಶ್ಯತೆ ನಿವಾರಣೆ… ಇಂತವುಗಳೆಲ್ಲ ಮಾನವ ಜೀವನದ ಪರಿಪೂರ್ಣತೆಗೆ ಒಂದು ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಸತ್ಯದ ಅಪರಿಮಿತ ಸಾಮರ್ಥ್ಯವನ್ನು ದರ್ಶನ ಮಾಡಿಸಿರುವ ಗಾಂಧಿ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಅಹಿಂಸಾತ್ಮಕ ಹೋರಾಟದ ಮೂಲಕವೇ ಬ್ರಿಟೀಷರ ಚಕ್ರಾಧಿಪತ್ಯವನ್ನು ಕೊನೆಗಾಣಿಸಿದ ಕಾರಣಪುರುಷರೂ ಆಗಿದ್ದಾರೆ. ತಮ್ಮ ಇಡೀ ಬದುಕನ್ನು ಸತ್ಯಶೋಧನೆಗಾಗಿ ಮುಡಿಪಿಟ್ಟ ಮಹಾತ್ಮಗಾಂಧೀಜಿ ಅವರು ಭಾರತೀಯ ಸಮಾಜವನ್ನು ಶಾಂತಿಯ ಮುನ್ನಲೆಗೆ ತಂದಂತವರು. ಗಾಂಧೀಜಿಯವರ ಕಟ್ಟ ಅನುಯಾಯಿಗಳಾಗಿದ್ದ ಈ ದೇಶದ ಎರಡನೆ ಪ್ರಧಾನ ಮಂತ್ರಿಗಳೂ ಆಗಿದ್ದ ಲಾಲ್ ಬಹದ್ದೂರ್ ಶಾಸೀಯವರ ಜನ್ಮ ದಿನವೂ ಇಂದೇ ಆಗಿದೆ ಎಂದು ತಿಳಿಸಿದರು.
ಹಿರಿಯ ಗಾಂಧಿ ಮಾರ್ಗಿ ಬಿ.ಕೆ.ಸೀತಾರಾಮಯ್ಯ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹರ್ದ್ದೂ ಶಾಸಿ ಇನ್ನೂ ಹೆಚ್ಚು ಕಾಲ ಬದುಕಿದ್ದರೆ ದೇಶ ಮತ್ತಷ್ಟು ಪ್ರಗತಿಪಥದತ್ತ ಹೋಗುತ್ತಿತ್ತು. ಗಾಂಧೀಜಿ ಜನರನ್ನು ತಿದ್ದಬೇಕು. ಹಿಂದುಳಿದ ವರ್ಗವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಸಂಕಲ್ಪತೊಟ್ಟಿದ್ದರು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. 16 ಅಂಶಗಳ ಕಾರ್ಯಕ್ರಮ ಗಳ ಪಟ್ಟಿ ಮಾಡಿಕೊಂಡು ಆ ಮೂಲಕ ಕೆಲಸ ಮಾಡಿಕೊಂಡು ಬಂದರು ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ, ಸಬರಮತಿ ಆಶ್ರಮ ನಿರ್ಮಾಣ, ಗ್ರಾಮಗಳ ವಿಕಸನಕ್ಕೆ ಹಲವು ಯೋಜನೆ ಹಾಕಿಕೊಂಡಿದ್ದರು.
ಹಿರಿಯ ಗಾಂಧಿ ಮಾರ್ಗಿ ಕೆ.ಟಿ.ವೀರಪ್ಪ, ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ರಾಜ್ಯ ಸಂಪನ್ಮೂಲ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ಡಾ.ಎಸ್.ತುಕಾರಾಮ್, ಸಹಾಯಕ ಪ್ರಾಧ್ಯಾಪಕರಾದ ಡಾ.ಚಿಕ್ಕಮಗಳೂರು ಗಣೇಶ ಸೇರಿದಂತೆ ಇತರರು ಹಾಜರಿದ್ದರು.
ಇದೇ ವೇಳೆ ಗಾಂಧೀಜಿಯವರ ವಿಚಾರಧಾರೆಗಳನ್ನು ಪಸರಿಸುವ ಪ್ರೊ.ಸಿ.ನಾಗಣ್ಣ ‘ಗಾಂಧೀಜಿ ದೃಷ್ಟಿಯಲ್ಲಿ ಜೀವನ ಕಲೆ’, ಡಾ.ಬಿ.ಕೆ.ಪ್ರಮೀಳಾದೇವಿ ಅವರ ಬರೆದು ಕೊಟ್ಟಿರುವ ’ಗಾಂಧೀಜಿ ಮತ್ತು ಯಶೋಧರಮ್ಮ ದಾಸಪ್ಪ’, ವೇಮಗಲ್ ಸೋಮಶೇಖರ್ ಅವರ ’ಮಹಾತ್ಮರಹಾದಿ’, ಯು.ಎನ್. ಸಂಗನಾಳಮಠ ಅವರ ‘ಗಾಂಧಿ ಸತ್ಪಥದತ್ತ’, ರಾಜು ಬಿ. ಕನ್ನಲಿ ಅವರ ’ಗಾಂಧೀಜಿಯ ಹೋರಾಟದ ಬಹುರೂಪಗಳು’, ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರ ’ಮಹಾತ್ಮ ನೆನೆವೆ ಅನುದಿನ’ ಹಾಗೂ ಪ್ರೊ.ಎಂ.ಎಸ್.ಶೇಖರ್ ಸಂಪಾದಿತ ‘ದಕ್ಷಿಣ ಭಾರತದ ಮೇಲೆ ಗಾಂಧಿ ಪ್ರಭಾವ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಕೃತಿಗಳ ಲೋಕಾರ್ಪಣೆ: ಮೈಸೂರು ವಿಶ್ವವಿದ್ಯಾಲಯ ಹಾಗೂ ಗಾಂಧಿ ಅಧ್ಯಯನ ಕೇಂದ್ರ ಗಾಂಧಿ ಭವನ ಮತ್ತು ಮಹಾಜನ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ 153ನೇ ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಅಹಿಂಸಾ ದಿನಾಚರಣೆ ಹಾಗೂ ಗಾಂಧೀಜಿ ಕುರಿತು ಗಾಂಧಿ ಭವನ ಪ್ರಕಟಿಸಿರುವ ಏಳು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಹಿರಿಯ ಗಾಂಧಿ ಮಾರ್ಗಿ ಬಿ.ಕೆ.ಸೀತಾರಾಮಯ್ಯ, ಹಿರಿಯ ಗಾಂಧಿ ಮಾರ್ಗಿ ಕೆ.ಟಿ.ವೀರಪ್ಪ, ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ರಾಜ್ಯ ಸಂಪನ್ಮೂಲ ಕೇಂದ್ರದ ವಿಶ್ರಾಂತ ನಿರ್ದೇಶಕರಾದ ಡಾ.ಎಸ್.ತುಕಾರಾಮ್ ಭಾಗವಹಿಸಿದ್ದರು.
Key words: UOM- Chancellor -Prof.G.Hemanth Kumar – gandhi jayanti