ಬಳ್ಳಾರಿ,ಜೂ,19,2020(www.justkannada.in): ಸಮ್ಮಿಶ್ರ ಸರ್ಕಾರ ಹೋಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅಡಿಪಾಯ ಹಾಕಿದವರು ಅರಣ್ಯ ಇಲಾಖೆ ಸಚಿವರಾದ ಆನಂದ್ ಸಿಂಗ್ ಅವರು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ , ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಲ್ಲರೂ ರಾಜೀನಾಮೆ ಕೊಡುವ ಬಗ್ಗೆ ಮಾತನಾಡುವವರೇ ಆಗಿದ್ದರು. ಆದರೆ, ಯಾವೊಬ್ಬರೂ ರಾಜೀನಾಮೆ ಕೊಡಲು ಮುಂದೆ ಬಂದಿರಲಿಲ್ಲ. ಮೊದಲು ರಾಜೀನಾಮೆ ಕೊಟ್ಟವರೇ ಇವರು. ಇವರಿಂದಲೇ ಇಂದು ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ನಮ್ಮ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದರೆ ಬಗೆಹರಿಸಿಕೊಡುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಯಾರಿಗೂ ಅನ್ಯಾಯವಾಗಿಲ್ಲ
ನಮ್ಮ ಜೊತೆಗೆ ಬಂದ ಯಾರಿಗೂ ಅನ್ಯಾಯವಾಗಿಲ್ಲ. ನಮ್ಮ ಜೊತೆಗಿರುವ ಬಹುತೇಕರಿಗೆ ಅವಕಾಶ ಸಿಕ್ಕಿದೆ. ಮುಖ್ಯಮಂತ್ರಿಗಳು ಹೇಳಿದಂತೆ ನಡೆದುಕೊಂಡಿದ್ದಾರೆ. ಮುಖಂಡರಾದ ಎಚ್.ವಿಶ್ವನಾಥ್ ಅವರಿಗೆ ಪರಿಷತ್ ಗೆ ಟಿಕೆಟ್ ಸಿಗದ ಬಗ್ಗೆ ಅವರ ಜೊತೆ ಮುಖ್ಯಮಂತ್ರಿಗಳು ಮಾತಮಾಡಿದ್ದಾರೆ. ಅವರೂ ಸಹ ಒಪ್ಪಿಗೆ ನೀಡಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಸ್ಥಾನ ನೀಡುವ ಭರವಸೆಯನ್ನು ನೀಡಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ವಿಶ್ವನಾಥ್ ಅವರ ಜೊತೆ ನಾವು ಈಗಲೂ ಇದ್ದೇವೆ. ಅವರ ಹೆಸರನ್ನು ಕೋರ್ ಕಮಿಟಿ ಪಟ್ಟಿಯಲ್ಲಿ ಇದ್ದರೂ ಹೈಕಮಾಂಡ್ ಮಟ್ಟದಲ್ಲಿ ಕೈಬಿಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷದಿಂದ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.
ಸಿದ್ದರಾಮಯ್ಯ, ಎಚ್ ಡಿ ಕೆಗೆ ಸಂಬಂಧವಿಲ್ಲ
ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಸ್ಥಾನ ಕೈತಪ್ಪುವುದರ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಕೈವಾಡ ಇಲ್ಲ. ಅವರಿಗೂ ಬಿಜೆಪಿಗೂ ಏನು ಸಂಬಂಧ? ನಮ್ಮ ಪಕ್ಷದ ವಿಚಾರದಲ್ಲಿ ಅವರು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ? ಇಂತಹ ಹೇಳಿಕೆಗಳು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಸಚಿವ ಎಸ್ ಟಿ ಎಸ್ ಉತ್ತರಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸವನ ಗೌಡ, ಬಳ್ಳಾರಿ ನಗರ ಅಧ್ಯಕ್ಷರಾದ ಕೆ.ಬಿ.ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.
Key words: Anand Singh- BJP – Cooperative Minister -ST Somashekhar-ballari