1ಕೋಟಿ ರೂ.ಗೂ ಹೆಚ್ಚು ಹಣ ಪಡೆದು ಅಂಗನವಾಡಿ ಟೀಚರ್ ಎಸ್ಕೇಪ್: ಕಣ್ಣೀರು ಹಾಕುತ್ತಿರುವ ಮಹಿಳೆಯರು

ಮೈಸೂರು,ಜೂನ್,18,2024 (www.justkannada.in): ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಂದ 1ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಪಡೆದು ವಂಚಿಸಿ ಅಂಗನವಾಡಿ ಟೀಚರ್ ಎಸ್ಕೇಪ್ ಆಗಿರುವ ಘಟನೆ ಮೈಸೂರು  ಜಿಲ್ಲೆ ಹುಣಸೂರು ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಶಾ ಕಾರ್ಯಕರ್ತೆ ಪುಟ್ಟಮ್ಮ ಮೋಸ ಮಾಡಿರುವ ಮಹಿಳೆ . ಪುಟ್ಟಮ್ಮ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಂದ ಹಣ ಪಡೆದು ಪರಾರಿಯಾಗಿದ್ದು ಇದೀಗ ಮಹಿಳೆಯರು ಕಂಗಾಲಾಗಿದ್ದಾರೆ.  ಸ್ವ ಸಹಾಯ ಸಂಘದ ಮಹಿಳೆಯರಿಗೆ ಹಣ ಕೊಡಿಸಿ ಅದೇ ಹಣ ವಾಪಸ್ ಪಡೆದು  ಪುಟ್ಟಮ್ಮ ಪರಾರಿಯಾಗಿದ್ದಾಳೆ.

ಮುತ್ತೂಟ್ ಫೈನಾನ್ಸ್, ಸತಿ ಫೈನಾನ್ಸ್, ಎಸ್.ಕೆ.ಎಸ್ ಫೈನಾನ್ಸ್ ಯೂನಿಯನ್ ಬ್ಯಾಂಕ್, ಧರ್ಮಸ್ಥಳ ಸಂಘ, ಬಜಾಜ್ ಫೈನಾನ್ಸ್, ಸೇರಿದಂತೆ 21 ಸಂಘಗಳಲ್ಲಿ 1 ಕೋಟಿಗೂ ಅಧಿಕ ಹಣ ಪಡೆದು ದೋಖಾ ಮಾಡಿದ್ದಾಳೆ.  ಮಹಿಳೆಯರು ತಮ್ಮ ಮನೆಯವರಿಗೆ ಗೊತ್ತಿಲ್ಲದೆ ಹಣ ಪಡೆದು ಪುಟ್ಟಮ್ಮನಿಗೆ ನೀಡಿದ್ದರು.

ಮಗಳ ಮದುವೆಗೆ ಹಣ ಹಾಗೂ ಚಿನ್ನ ಪಡೆದು ಪುಟ್ಟಮ್ಮ ವಂಚಿಸಿದ್ದು, ಇದೀಗ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಈಗ ಸಂಘಕ್ಕೆ ಹಣ ಕಟ್ಟೋಕೆ ಆಗದೆ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.  ಪುಟ್ಟಮ್ಮನಿಂದ 70 ಕುಟುಂಬಗಳು ಬೀದಿಗೆ ಬಿದ್ದಿದ್ದು,  ನ್ಯಾಯ ಕೊಡಿಸುವಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.

Key words: Anganwadi, teacher,  escapes, money, fraud