ಬೆಂಗಳೂರು:ಆ-22: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ 21 ಕೇಂದ್ರಗಳ 189 ಸಿಬ್ಬಂದಿ 20 ತಿಂಗಳಿಂದ ಗೌರವಧನ ಸಿಗದೆ ಪರದಾಡುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ತರಬೇತಿ ಕೇಂದ್ರಗಳು ಸ್ವಯಂ ಸೇವಾ ಸಂಸ್ಥೆ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಕಾರ್ಯಾಚರಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ಐಸಿಡಿಎಸ್ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಲಾಖೆಯ ಮಾರ್ಗಸೂಚಿಯಂತೆ ಸುಮಾರು 40 ವರ್ಷಗಳಿಂದ ತರಬೇತಿ ನೀಡುತ್ತಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ಸಿಬ್ಬಂದಿಗೆ ಉಪ ನಿರ್ದೇಶಕರ ಮೂಲಕ ಹಣ ಬಿಡುಗಡೆಯಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ಗೌರವಧನ ಬರುವುದು ನಿಂತಿದೆ. ತರಬೇತಿ ಕೇಂದ್ರ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೂ 45 ಲಕ್ಷ ರೂ. ಬಿಡುಗಡೆ ಆಗಬೇಕಿದೆ.
ಸರ್ಕಾರಗಳ ಗುದ್ದಾಟ: ಆರಂಭದಲ್ಲಿ ಕೇಂದ್ರ ಸರ್ಕಾರದ ಪೂರ್ಣ ಅನುದಾನದಲ್ಲಿ ಐಸಿಡಿಎಸ್ ಯೋಜನೆ ನಡೆಯುತ್ತಿತ್ತು. ನಂತರ ಕೇಂದ್ರ ಶೇ.90 ಅನುದಾನ ನೀಡುತ್ತಿತ್ತು. ಈಗ 60:40ರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆದಿದೆ. ರಾಜ್ಯ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಣ ಬಳಸಿದರೆ ಮಾತ್ರ ಅನುದಾನ ಬಿಡುಗಡೆ ಮಾಡುವುದಾಗಿ ಕೇಂದ್ರ ಹೇಳಿದರೆ, ಕೇಂದ್ರ ಸರ್ಕಾರ ಕೊಡದೆ ನಾವು ಹೇಗೆ ನೀಡುವುದು ಎಂಬುದು ರಾಜ್ಯ ಸರ್ಕಾರದ ವಾದ. ಈಗ ಎರಡರಲ್ಲೂ ಬಿಜೆಪಿ ಸರ್ಕಾರಗಳೇ ಇದ್ದು, ಸಿಎಂ ಯಡಿಯೂರಪ್ಪ ಕ್ರಮಕೈಗೊಳ್ಳಲಿ ಎಂಬುದು ಸಿಬ್ಬಂದಿ ಆಗ್ರಹ.
ತರಬೇತಿಯೂ ನಡೆಯುತ್ತಿಲ್ಲ
ಇಲಾಖೆಯಿಂದ ಲಿಖಿತ ಸೂಚನೆ ಬಾರದೆ ತರಬೇತಿ ಕೇಂದ್ರಗಳಲ್ಲಿ ಕಳೆದ ಏಪ್ರಿಲ್ನಿಂದ ತರಬೇತಿ ನಡೆಯುತ್ತಿಲ್ಲ. ಈ ಕೇಂದ್ರಗಳಲ್ಲಿ ಬಹುತೇಕರು ಸ್ನಾತಕೋತ್ತರ ಪದವೀಧರರು ಮತ್ತು ಮಹಿಳೆಯರಿದ್ದಾರೆ. ಶೇ.60 ಸಿಬ್ಬಂದಿ 45 ವರ್ಷ ಮೇಲ್ಪಟ್ಟವರು. ಕೇಂದ್ರಗಳನ್ನು ಮುಚ್ಚುವ ಭೀತಿ ಸಿಬ್ಬಂದಿಯಲ್ಲಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಗೌರವಧನವೂ ಇಲ್ಲದೆ, ಇತ್ತ ಸ್ಪಷ್ಟ ಮಾಹಿತಿಯೂ ಇಲ್ಲದೆ ಭವಿಷ್ಯದ ಬಗ್ಗೆ ಕಂಗಾಲಾಗಿದ್ದಾರೆ.
ಕೇಂದ್ರಗಳ ಕಾರ್ಯನಿರ್ವಹಣೆ
ಅಂಗನವಾಡಿ ಕಾರ್ಯಕರ್ತೆಯರಿಗೆ ಆರಂಭದಲ್ಲಿ 32 ದಿನಗಳ ವೃತ್ತಿ ತರಬೇತಿಯನ್ನು ಕೇಂದ್ರಗಳ ಮೂಲಕ ನೀಡಿ, ನಂತರ ಪುನಶ್ಚೇತನ ತರಬೇತಿಯನ್ನು 2 ವರ್ಷಕೊಮ್ಮೆ ನೀಡಲಾಗುತ್ತದೆ. ಸಹಾಯಕಿಯರಿಗೆ 8 ದಿನಗಳ ಓರಿಯಂಟೇಷನ್ ಹಾಗೂ 5 ದಿನಗಳ ಪುನಃಶ್ಚೇತನ ತರಬೇತಿಯನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.
ಕೃಪೆ:ವಿಜಯವಾಣಿ