ಹುಬ್ಬಳ್ಳಿ,ಮೇ,20,2024 (www.justkannada.in): ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನ ಇಂದು ಅಥವಾ ನಾಳೆ ಸಿಐಡಿ ತನಿಖೆಗೆ ಹಸ್ತಾಂತರ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಹುಬ್ಬಳ್ಳಿಯ ವೀರಾಪುರ ಕಾಲೋಜಿನಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ತನ್ನ ಮಗಳನ್ನು ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವಂತೆ ಪೋಷಕರು ಮನವಿ ಮಾಡಿದರು.
ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ಇಂದು ಅಥವಾ ನಾಳೆ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗುತ್ತದೆ. ಅಂಜಲಿ ಹತ್ಯೆಯ ನೈಜ ಕಾರಣ ಹೊರಬರಬೇಕು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದರು.
ಇನ್ನು ರಾಜ್ಯದಲ್ಲಿ ಡ್ರಗ್ಸ್ ತಡೆಗಟ್ಟಲು ವಾರ್ ಡಿಕ್ಲೇರ್ ಮಾಡಿದ್ದೇವೆ. ನಾನು ಸದನದಲ್ಲಿ ಡ್ರಗ್ಸ್ ಬಗ್ಗೆ ಮಾತನಾಡಿದ್ದೇನೆ. ಸುಮಾರ 200 ಕೋಟಿ ರೂ ಮೌಲ್ಯದ ಡ್ರಗ್ಸ್ ಸುಟ್ಟಿ ಹಾಕಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ನಮ್ಮ ಸುತ್ತಮುತ್ತಲಿನ 40 ಜನರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ನಾವು ಯಾರ ಫೋನ್ ಟ್ಯಾಪ್ ಮಾಡುತ್ತಿಲ್ಲ. ಯಾರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಹೇಳಿ ಎಂದರು.
Key words: Anjali Ambigere, case, CID, Dr. G. Parameshwar