ಬೆಂಗಳೂರು,ಸೆಪ್ಟಂಬರ್,23,2024 : ‘ಅನ್ನ’ ಕಾಡಿನ ಸೌದೆಯ ಉರಿಯ ಒಲೆಯ ಮೇಲೆ ಇಟ್ಟೆರುವ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಬೇಯುತ್ತಿದೆ. ಅನ್ನವನ್ನು ಊಟ ಮಾಡಬೇಕು ಎನ್ನುವವರ ಬಯಕೆಯು ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಬಾಯಲ್ಲಿ ನೀರು ಸುರಿಯುತ್ತಿದೆಯೋ ಅಥವಾ ಒಡಲಾಳದಲ್ಲಿ ಜಠರಾಗ್ನಿ ಕುದಿಯುತ್ತ ಸಂಕಟ ಉಂಟಾಗಿದೆಯೋ ಒಟ್ಟಿನಲ್ಲಿ ಮನಸ್ಸು, ದೇಹ ಎರಡೂ ಅನ್ನವನ್ನು ಬೇಡುತ್ತಿವೆ. ಅಂತೂ ಮಡಿಕೆಯಿಂದ, ತಗ್ಗು ನುಗ್ಗಾಗಿರುವ ಸಿಲವರ ತಟ್ಡೆಗೆ ಅನ್ನ ಬಂದು ಕುಳಿತುಕೊಂಡಿದೆ. ಇನ್ನೇನು ಕೈಯಿಂದ ಎತ್ತಿಕೊಂಡು ಬಾಯಿಗೆ ಹಾಕಬೇಕು…..
– ಹೀಗೆ ಸಿಲ್ವರ್ ಸ್ಕ್ರೀನ್ ಮೇಲೆ ‘ಅನ್ನ’ ಸಿನಿಮಾ ತೆರೆದುಕೊಳ್ಳುತ್ತದೆ. ಅಡುಗೆ ಕೋಣೆಯಿಂದ ಪ್ರಾರಂಭವಾಗಿ ಇಡೀ ಊರನ್ನೇ ಆವರಿಸಿಕೊಳ್ಳುವ ಅನ್ನ, ಜನರಿಂದ ಜನಕ್ಕೆ, ವರ್ಗದಿಂದ ವರ್ಗಕ್ಜೆ, ವಯಸ್ಸಿನಿಂದ ವಯಸ್ಸಿಗೆ ಬೇರೆಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಅಪರೂಪಕ್ಕೆ ಹಿಡಿ ಅಕ್ಕಿ ಸಿಕ್ಕು, ಅದನ್ನು ಅನ್ನ ಮಾಡಿ ಉಣ್ಣಬೇಕು ಅನ್ನುವ ಹೊತ್ತಿಗೆ ಮಗು ತಟ್ಟೆಗೆ ಉಚ್ಚೆ ಹುಯಿದರು,ಅನ್ನವನ್ನು ನೀರಿನಿಂದ ತೊಳೆದು ತಿನ್ನುವ ತಾಯಿ. ಕಾಡಿನಲ್ಲಿ ಕಿರುಬ ಬಿಟ್ಟಿದ್ದ ಅರ್ಧಂಬರ್ಧ ಮಾಂಸವನ್ನು ಸಾರು ಮಾಡಿ, ಅಪರೂಪಕ್ಕೆ ಅನ್ನ ಮಾಡಿದ ಮಹಿಳೆಯು,ತನ್ನ ಮಗನ ಜತೆ ಕುಳಿತಿದ್ದ ಹುಡುಗನಿಗೆ ಅನ್ನ ನೀಡಬೇಕಾಗುತ್ತದೆ ಎಂದು ಮಾಂಸದ ಸಾರನ್ನು ಲೋಟಕ್ಕೆ ತುಂಬಿ ಕಳುಹಿಸುವ ಪರಿ ಬರದ ನಾಡಿನ ಜನರು ಅನ್ನಕ್ಕಾಗಿ ಅನುಭವಿಸುವ ಮಾನಸಿಕ ಬವಣೆಗೆ ರೂಪಕವಾಗಿದೆ.
ಈಗಂತೂ ನೂರಾರು ವೆರೈಟಿಯ ಅಕ್ಕಿ ಸಿಗುತ್ತಿದೆ. ಬಾಸುಮತಿ, ಸೋನಮಸೂರಿ, ಬಿರಿಯಾನಿ ಅಕ್ಕಿ ಹೀಗೆ ತರೇವಾರಿ ಆಯ್ಕೆಗಳು ಉಳ್ಳವರ ಪಾಲಿಗೆ ಇದೆ. ಇದರಿಂದ ಅನ್ನದ ಬಯಕೆಯ ತೀವ್ರತೆ ಅಷ್ಟರ ಮಟ್ಟಿಗೆ ಅರಿವಿಗೆ ಬರುವುದಿಲ್ಲ. ಆದರೆ 70-80ನೇ ಇಸವಿಯಲ್ಲಿ ಬಡವರಿಗೆ ಅನ್ನವೆಂದರೆ ಇಂದ್ರನ ಆಸ್ಥಾನದ ಷಡ್ರಸ ಭೋಜನ. ಅಂತಹ ಕಾಲಘಟ್ಟದ ಚಿತ್ರಣವನ್ನು ಅನ್ನ ಸಿನಿಮಾ ಪರಿಪೂರ್ಣವಾಗಿ ಕಟ್ಟಿಕೊಟ್ಟಿದೆ.
ಹನೂರು ಚನ್ನಪ್ಪ ನವರ ಗಟ್ಟಿ ಕಥೆ ಸಿನಿಮಾದ ತಳಪಾಯವಾಗಿದೆ. ಯಾವುದೇ ವೈಭವೀಕರಣವಿಲ್ಲದೆ , ತೆರೆಯ ಮೇಲೆ ಹೇಳಬೇಕಾಗಿರುವುದನ್ನು ಚೌಕಟ್ಟಿನ ಆಚೆ ಹೋಗದೆ ಸಮರ್ಪಕವಾಗಿ ಮುಟ್ಟಿಸಿದ್ದಾರೆ ನಿರ್ದೇಶಕ ಇಸ್ಲಾಹುದೀನ್. ಸಂಗೀತದಲ್ಲಿ ದೇಸಿ ತನವಿದೆ. ಎಲ್ಲವೂ ಒಪ್ಪ ಒರಣವಾಗಿವೆ. ಆದರೆ ಈ ಸಿನಿಮಾಕ್ಕೆ ತಕ್ಕಂತೆ ಪ್ರಚಾರ ಕೊರತೆ ಇದೆ. ನಿರ್ಮಾಪಕ ಬಳಿ ಕೋಟ್ಯಂತರ ರೂ.ಬಂಡವಾಳವಿದ್ದಿದ್ದರೆ ಸಿನಿಮಾ ‘ಎಲ್ಲಿಗೋ’ ಹೋಗಿ ಮುಟ್ಡಿರುತ್ತಿತ್ತು. ಅನ್ನ ಕೊಡುವ ರೈತ ದೇಶದ ಬೆನ್ನೆಲುಬು ಎಂದು ಹಾಡಿ ಹೊಗಳುತ್ತಾರೆ. ಅನ್ನದ ಸಿನಿಮಾಕ್ಕೆ ಬೆಂಬಲವಾಗಿ ಯಾರೂ ಇಲ್ಲದ್ದು…(ಪದಗಳಲ್ಲಿ ಹೇಳಲು ಆಗದು)
ಪುನೀತ್ ಬದುಕಿದ್ದರೆ:
ಹೊಸತನಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಅಪ್ಪು ಬದುಕಿದ್ದರೆ ಅನ್ನ ಸಿನಿಮಾದ ಖದ್ದರ್ ಬೇರೆಯಾಗಿ ಇರುತ್ತಿತ್ತು. ಕಂಟೆಂಟ್ ಸಿನಿಮಾವನ್ನು ಜನರಿಗೆ ಮುಟ್ಟಿಸಬೇಕು ಎನ್ನುವ ಮಹದಾಸೆಯಿಂದ ನಾಲ್ಕು ವರ್ಷಗಳ ತನಕ ಕಾಸು ಸಿಕ್ಕ ಸಮಯದಲ್ಲಿ ಚಿತ್ರೀಕರಣ ಮಾಡಿ, ಸಿನಿಮಾ ಪೂರ್ಣಗೊಳಿಸಿರುವ ಟೀಮ್ ನ ಸಾಹಸವೇ ಇನ್ನೊಂದು ಸಿನಿಮಾಕ್ಕೆ ಕಥಾವಸ್ತು ಆಗುತ್ತದೆ. ಅಷ್ಡು ಕಷ್ಟವಿದ್ದರೂ ಸಿನಿಮಾದ ಮರ್ಯಾದೆಗೆ ಒಂದೀನಿತೂ ಧಕ್ಕೆ ಉಂಟುಮಾಡದೆ ನೀಟಾಗಿ ತೆರೆಯ ಮೇಲೆ ತಂದಿರುವುದಕ್ಕೆ ನಮಸ್ಕಾರಗಳು ಸಾಲದು.
ಮಂಗಳೂರಿನ ಶೆಟ್ಟರ ಟೀಮನ್ನು ನೋಡಿ ನಮ್ಮ ಈ ಭಾಗದ ಜನಪ್ರಿಯ ಸಿನಿಮಾ ನಟರು ಕಲಿಯಬೇಕಾಗಿದೆ. ಸಿನಿಮಾ ರಂಗಕ್ಕೆ ಪ್ರವೇಶಿಸುವ ಮುನ್ನ ‘ರಂಗ’ದಲ್ಲಿ ಒಟ್ಟಿಗೆ ಹಾಡಿ ಬೆಳೆದ ಸಹಪಾಠಿಗಳಿಗೆ ಇಂತಹ ಒಳ್ಳೆಯ ವಿಷಯಕ್ಕೆ ಸಪೋರ್ಟ್ ಮಾಡುವ ಗುಣ ಬೆಳೆಸಿಕೊಳ್ಳುವ ತುರ್ತು ಇದೆ. ಇಲ್ಲದೇ ಹೋದರೆ ಕನ್ನಡದ ಮಕ್ಕಳು ನೆರೆಯ ತಮಿಳು, ಮಲೆಯಾಳಂ, ಉತ್ತರದ ಹಿಂದಿಯ ಸಿನಿಮಾಗಳನ್ನು ಇಂದ್ರ- ಚಂದ್ರ ಎಂದು ಉಘೇ ಉಘೇ ಎನ್ನುತ್ತಲೆ ಇರಬೇಕಾಗುತ್ತದೆ.
-ವಿ.ಡಿ.ಆರ್.ಪಟೇಲ್
Key words: ‘Anna’, movie, Farmers,