ಇನ್ಮುಂದೆ ಅನ್ನಭಾಗ್ಯ ಹಣದ  ಬದಲು ಪೂರ್ಣ 10 ಕೆಜಿ ಅಕ್ಕಿ ವಿತರಣೆ: ಸರ್ಕಾರ ತೀರ್ಮಾನ

ಬೆಂಗಳೂರು, ಫೆಬ್ರವರಿ 19,2025 (www.justkannada.in): ಇನ್ಮುಂದೆ  ಅನ್ನಭಾಗ್ಯ ಯೋಜನೆಯ  ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು ಈ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ  ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ ಅವರು, ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ 170 ರೂ. ಹಣ ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದು , ಇದೇ ತಿಂಗಳಿನಿಂದ ನೀಡಲಿದ್ದೇವೆ . ನಮಗೆ ಬೇಕಾಗಿರುವ 5 ಕೆಜಿ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರವು ಒಪ್ಪಿಗೆ ಕೊಟ್ಟಿದೆ ಎಂದರು.

ನಮ್ಮ ಇಲಾಖೆ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸ್ಪಂದಿಸಿದ್ದಾರೆ. ಈಗ ಕೇಂದ್ರ ಸಚಿವರು ಅಕ್ಕಿ‌ ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರವರೆಗೂ ಹಣ ನೀಡಿದ್ದೇವೆ. ಜನವರಿವರೆಗೆ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ. ಫೆಬ್ರವರಿಯಿಂದಲೇ ಹಣದ ಬದಲು ಸಂಪೂರ್ಣ 10 ಕೆಜಿ ಅಕ್ಕಿ ಕೊಡುವ  ನಿರ್ಧಾರ ಮಾಡಿದ್ದೇವೆ ಎಂದರು.

ಕೆಂದ್ರ ಸರ್ಕಾರ ಮೊದಲು ಒಂದು ಕೆಜಿ ಅಕ್ಕಿಗೆ 28 ರೂ. ನಿಗದಿಪಡಿಸಿತ್ತು. ಜನವರಿಯಿಂದ ಪ್ರತಿ ಕೆಜಿಗೆ 22.50 ರೂ ನಂತೆ ಕೊಡಲು ನಿರ್ಧರಿಸಿದೆ. ಎಲ್ಲಿವರೆಗೆ ಕೇಂದ್ರ ಅಕ್ಕಿ ಕೊಡುತ್ತದೆಯೋ ಅಲ್ಲಿವರೆಗೆ ಪೂರ್ಣ ಪ್ರಮಾಣದ ಅಕ್ಕಿ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದರು.

Key words: Government,  decides,  10 kg rice,  instead, Annabhagya