ಮೈಸೂರು,ನ,15,2019(www.justkannada.in): ಮೈಸೂರು-ಚೆನ್ನೈ ನಡುವೆ ನಿತ್ಯ ಬೆಳಿಗ್ಗೆ ಟ್ರೂಜೆಟ್ ಏರ್ ಲೈನ್ಸ್ ಸಂಸ್ಥೆಯ ಮತ್ತೊಂದು ವಿಮಾನವು (ಎಟಿಆರ್-72) ಹಾರಾಟ ಆರಂಭಿಸಲಿದ್ದು, ಇಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಹಳದಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಚಾಲನೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಮೈಸೂರು-ಚೆನ್ನೈ ನಡುವೆ ಸಂಜೆ ವೇಳೆ ಸಂಚರಿಸುತ್ತಿರುವ ವಿಮಾನಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರತಿದಿನ ಬೆಳಿಗ್ಗೆ ಚೆನ್ನೈ ಪ್ರಯಾಣಕ್ಕೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಟ್ರೂಜೆಟ್ ವಿಮಾನ ಹಾರಾಟ ಆರಂಭಿಸಲಾಗುತ್ತಿದೆ ಎಂದರು.
ಶಿರಡಿ-ಬೆಳಗಾವಿ ನಗರಗಳಿಗೆ ಮೈಸೂರಿನಿಂದ ಮತ್ತೆ ಎರಡು ವಿಮಾನಗಳ ಹಾರಾಟಕ್ಕೆ ಟ್ರೂಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ಆಸಕ್ತಿ ತೋರಿಸಿದ್ದು ಈಗಾಗಲೇ ಸಮೀಕ್ಷೆ ನಡೆಸಿವೆ. ಮೈಸೂರು-ಶಿರಡಿ ನಡುವೆ ಬೆಂಗಳೂರು ಮಾರ್ಗವಾಗಿ ಹಾರಾಟ ನಡೆಸಲು ಇಂಡಿಗೋ ತಯಾರಿ ನಡೆಸಿದ್ದು, ಯಾತ್ರಾರ್ಥಿಗಳನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ನವೆಂಬರ್ ಅಂತ್ಯದಿಂದ ಈ ಸೇವೆ ಆರಂಭವಾಗುವ ನಿರೀಕ್ಷೆಯಿದ್ದು, ಉತ್ತರಕರ್ನಾಟಕ ಭಾಗದ ವರ್ತಕರು, ಉದ್ದಿಮೆದಾರರನ್ನು ಗುರಿಯಾಗಿಸಿಕೊಂಡು ಬೆಳಗಾವಿ-ಮೈಸೂರಿಗೆ ವಿಮಾನ ಸೇವೆ ಆರಂಭಿಸಲು ಟ್ರೂಜೆಟ್ ಆಸಕ್ತಿ ತೋರಿದ್ದು, ಡಿಸೆಂಬರ್ ಎರಡನೇ ವಾರ ಕಾರ್ಯಾರಂಭಗೊಳಿಸಲಿ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಈ ಸಂದರ್ಭ ಡಿಸಿಪಿ ಮುತ್ತುರಾಜ್ ಎಂ, ಸೇಫ್ ವ್ಹೀಲ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್, ಬಿಜೆಪಿ ನಾಯಕರಾದ ರಾಜೇಂದ್ರ, ಅನಿಲ್ ಥಾಮಸ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚೆನ್ನೈ ನಗರದಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ಈ ವಿಮಾನವು (2T 209) ಬೆಳಿಗ್ಗೆ 8.10ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅದೇ ವಿಮಾನವು (2T 210) ಬೆಳಿಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು, ಚೆನ್ನೈ ನಗರಕ್ಕೆ ಬೆಳಿಗ್ಗೆ 10ಗಂಟೆಗೆ ತಲುಪಲಿದೆ.
ಉಡಾನ್ ಯೋಜನೆಯ ನಂತರ ಸೇವೆ ಒದಗಿಸುತ್ತಿರುವ ಪ್ರಥಮ ವಿಮಾನ ಇದಾಗಿದ್ದು, ಸರ್ಕಾರದ ಯಾವುದೇ ಸಬ್ಸಿಡಿ ಅಪೇಕ್ಷಿಸದೇ ಹಾರಾಟ ಸೇವೆ ಒದಗಿಸಲಿದೆ. ಬೆಳಗಿನ ಫ್ಲೈಟ್ ಗೆ ಭಾರೀ ಬೇಡಿಕೆ ಇದ್ದು, ಒಂದು ಟ್ರಿಪ್ ಗೆ ಶೇ.85ರಷ್ಟು ಆಸನಗಳು ಭರ್ತಿಯಾಗುತ್ತವೆ ಎಂಬುದನ್ನು ಟ್ರೂಜೆಟ್ ಖಾತರಿ ಪಡಿಸಿಕೊಂಡಿದ್ದು, ಈಗಾಗಲೇ ಆನ್ ಲೈನ್ ನಲ್ಲಿ ಟಿಕೇಟ್ ಬುಕ್ಕಿಂಗ್ ಆರಂಭವಾಗಿದೆ. ಉದ್ಯಮಿಗಳು, ವ್ಯಾಪಾರಸ್ಥರು ಪ್ರವಾಸಿಗರು, ತಮಿಳ್ನಾಡು ಮೂಲದವರಿಂದ ಬೆಳಗಿನ ವಿಮಾನಕ್ಕೂ ಬೇಡಿಕೆ ಬಂದಿದೆ. ಮೈಸೂರಿನಿಂದ ಹೈದ್ರಾಬಾದ್, ಕೊಚ್ಚಿ, ಬೆಂಗಳೂರು, ಗೋವಾ, ಚೆನ್ನೈಗಳಿಗೆ ಇಂಡಿಗೀ ಏರ್ ಲೈನ್ಸ್ ಅಲಯನ್ಸ್ ಏರ್ ಲೈನ್ಸ್ ಹಾಗೈ ಟ್ರೂಜೆಟ್ ಸಂಸ್ಥೆಗಳ ಒಟ್ಟು 6ವಿಮಾನಗಳು 12 ಟ್ರಿಪ್ ಹಾರಾಟ ನಡೆಸುತ್ತಿವೆ. ಇಂದಿನಿಂದ ಟ್ರೂಜೆಟ್ ನ ಮತ್ತೊಂದು ವಿಮಾನ ಕಾರ್ಯಾರಂಭ ಮಾಡುತ್ತಿರುವುದರಿಂದ ಒಟ್ಟು 7ವಿಮಾನಗಳು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದಂತಾಗಲಿದೆ.
Key words: Another- flight – Truejet Airlines – Mysore-Chennai-MP-prathap simha