ದಾಖಲೆ ತಿರುಚಿ‌ ಕೋಟಿ- ಕೋಟಿ ಹಣ ಗುಳುಂ: ಮುಡಾದಲ್ಲಿ‌ ಮತ್ತೊಂದು ಹಗರಣ ಬಯಲು

ಮೈಸೂರು,ನವೆಂಬರ್,5,2024 (www.justkannada.in):  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಅಕ್ರಮ ಸೈಟು ಹಂಚಿಕೆ  ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಇದೀಗ ಮುಡಾದಲ್ಲಿ‌ ಮತ್ತೊಂದು ಹಗರಣ ಬಯಲಾಗಿದೆ.

ಹೌದು,  ದಾಖಲೆಗಳನ್ನ ತಿರುಚಿ‌ ನಕಲಿ‌ ದಾಖಲೆ ಸೃಷ್ಠಿಸಿ ಕೋಟಿ ಕೋಟಿ ಹಣ ಗುಳುಂ ಮಾಡುವ ಮೂಲಕ ಮುಡಾಗೆ ಮುಡಾದ ಸಿಬ್ಬಂದಿಗಳು ಹಾಗೂ ನೌಕರರೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮುಡಾ ಪ್ರಾಧಿಕಾರಕ್ಕೆ ಗ್ರಾಹಕರು ಕಟ್ಟಿದ್ದ ಹಣವನ್ನ ಗುಳುಂ ಮಾಡುವ ಮೂಲಕ ಮುಡಾದ ಸಿಬ್ಬಂದಿಗಳು ಹಾಗೂ  ನೌಕರರು ಬೇಲಿಯೇ ಎದ್ದು‌ ಹೊಲ ಮೇಯ್ದಂತೆ ವಂಚನೆ ಮಾಡಿದ್ದಾರೆ. ನಗದು ರೂಪದಲ್ಲಿ ಹಣ‌ ಪಡೆದು ಸಿಬ್ಬಂದಿಗಳು ಮೋಸ ಮಾಡಿದ್ದಾರೆ.

ಈ ಹಗರಣ ಸಂಬಂಧ  ಆರ್ ಟಿಐ ಕಾರ್ಯಕರ್ತ ಗಂಗರಾಜು ದಾಖಲೆ ಬಿಡುಗಡೆ ಮಾಡಿದ್ದಾರೆ.  ಗ್ರಾಹಕರು ತಮ್ಮ ನಿವೇಶನಗಳಿಗೆ ಸೇವೆ ಪಡೆಯಲು ಸಿ ಆರ್, ಖಾತೆ ವರ್ಗಾವಣೆ, ಟೈಟಲ್‌ ಡೀಡ್ ಸೇವೆ ಪಡೆಯಲು ಲಕ್ಷ- ಲಕ್ಷ ಹಣ‌ ಕಟ್ಟಿದ್ದರು. ಬ್ಯಾಂಕ್ ಸಿಬ್ಬಂದಿ‌ ಹಾಗೂ ನೌಕರರಿಗೆ  ಹಣ ನೀಡಿದ್ದರು.

ಆದರೆ ಮುಡಾ ಸಿಬ್ಬಂದಿಗಳು ಬ್ಯಾಂಕಿಗೆ ಖಾತೆಗೆ ಹಣ ಕಟ್ಟದೆ ಗ್ರಾಹಕರನ್ನೇ ಯಾಮಾರಿಸಿ, ನಕಲಿ ಚಲನ್ ಗಳನ್ನ ಸೃಷ್ಠಿಸಿ ಹಣವನ್ನು ದೋಚಿದ್ದಾರೆ.  5 ಕೋಟಿ ರೂ. ಗೂ ಅಧಿಕ ಹಣವನ್ನ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಆದರೆ ಪ್ರಕರಣದಲ್ಲಿ ಗ್ರಾಹಕರ ಮೇಲೆಯೇ ಎಫ್ ಐ ಆರ್ ದಾಖಲು ಮಾಡಲಾಗಿದೆ. ಮುಡಾ ಪ್ರಾಧಿಕಾರದಿಂದ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಮ್ಮ ಮೇಲೆ ದೂರು‌ ದಾಖಲಾದ ಬಳಿಕ ಗ್ರಾಹಕರು ಕಂಗಾಲಾಗಿದ್ದು, ಈ ಪ್ರಕರಣದಲ್ಲಿ ಹಣ್ಣು ತಿಂದವನು ಬಚಾವ್ , ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡಂತಾಗಿದೆ.

Key words: Another, scam, exposed,  Muda, mysore